ಎಸ್ಸಿ ಜಾತಿ ಪ್ರಮಾಣಪತ್ರ: ದಾರಿ ತಪ್ಪಿಸುತ್ತಿರುವವರ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ

ಸುದ್ದಿ360 ದಾವಣಗೆರೆ, ಸೆ.17: ವೀರಶೈವ-ಲಿಂಗಾಯತ ಜಂಗಮರಿಗೆ ಎಸ್ಸಿ ಜಾತಿ ಪ್ರಮಾಣಪತ್ರ ನೀಡುತ್ತಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಹರಿಹರದಲ್ಲಿ  ತುಂಗಭದ್ರ ನದಿ ನೀರಿಗೆ ಇಳಿದು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಹರಿಹರದಲ್ಲಿ ಶುಕ್ರವಾರ ತುಂಗಭದ್ರಾ ನದಿ ಸಮೀಪ ಸೇರಿದ ಪ್ರತಿಭಟನಾಕಾರರು ಪರಿಶಿಷ್ಟರ ಸೌಲಭ್ಯವನ್ನು ಕಬಳಿಸುತ್ತಿರುವುದರ ಬಗ್ಗೆ ಕಿಡಿಕಾರಿದರು. ಈ ವೇಳೆ ದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಜನರ ಏಳಿಗೆಗಾಗಿ ಸಂವಿಧಾನದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಸೌಲಭ್ಯವನ್ನು ಬೇಡ ಜಂಗಮ, ಬುಡ್ಗ ಜಂಗಮ ಜಾತಿಗಳಿಗೂ ಕಲ್ಪಿಸಲಾಗಿದೆ. ಆದರೆ, ಇತ್ತೀಚೆಗೆ ವೀರಶೈವ-ಲಿಂಗಾಯತ ಜಂಗಮರು ಸಹ ಬೇಡ ಜಂಗಮರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಪರಿಶಿಷ್ಟರ ಸೌಲಭ್ಯವನ್ನು ಕಬಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ವೀರಶೈವ ಲಿಂಗಾಯಿತ ಜಂಗಮರು ಎಸ್ಸಿ ಪ್ರಮಾಣ ಪತ್ರ ಪಡೆದಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ತ್ವರಿತವಾಗಿ ವಿಲೆ ಮಾಡಲು ಪ್ರತಿ ಜಿಲ್ಲೆಯಲ್ಲೂ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಿರುವ, ದುರುದ್ದೇಶದಿಂದಲೆ ಹುಟ್ಟು ಹಾಕಿರುವ ಅಖಿಲ ಕರ್ನಾಟಕ ಡಾ.ಅಂಬೇಡ್ಕರ್ ಬೇಡ ಜಂಗಮ್ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ(ರಿ)ಬೆಂಗಳೂರು ಸಂಸ್ಥೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂಬುದು ಸೇರಿಂದತೆ ನಾನಾ ಬೇಡಿಕೆ  ಈಡೇರಿಸುವಂತೆ ಆಗ್ರಹಿಸಿದರು.

ದಸಂಸ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ, ಲಂಬಾಣಿ ಸಮಾಜದ ತಾಲೂಕು ಅಜ್ಜಾ ನಾಯ್ಕ್, ಮುಖಂಡರಾದ ಶಶಿಕುಮಾರ್, ಜಿಗಳಿ ಪ್ರದೀಪ್ ಕುಮಾರ್, ಗದಿಗೆಪ್ಪ, ಪರಶುರಾಮ್, ಕಡ್ಲೆಗೊಂದಿ ತಿಮ್ಮಣ್ಣ, ಹೊಸಪಾಳ್ಯ ಯುವರಾಜ, ಭಾನುವಳ್ಳಿ ಚೌಡಪ್ಪ, ಕರಿಬಸಪ್ಪ, ಹಾಲೇಶ್, ರಾಜು, ಹನುಮಂತ, ಸೋಮ, ನಿಂಗರಾಜ್ ಗಾಂಧಿನಗರ, ಮಹಾಂತೇಶ್ ಪೈಲ್ವಾನ್, ಕೆಟಿಜೆ ನಗರ ಪ್ರದೀಪ್, ಪರಮೇಶ್, ದೊಡ್ಡಪ್ಪ, ಬುಡುಗ ಜಂಗಮ ಸಮಾಜದ ಚಿನ್ಮಯರೆಡ್ಡಿ, ವಿ.ಸಣ್ಣ ಅಜ್ಜಯ್ಯ, ದುರುಗಪ್ಪ, ಭೀಮಣ್ಣ, ಶಿವು ಭೋವಿ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!