ಅಯೊಧ್ಯೆಗೆ ಸೀತೆಯ ದೊಡ್ಡ ನಮಸ್ಕಾರ !?

ಹೆಣ್ಣಿನ ಕ್ರಿಯಾಶೀಲತೆ ಸಹಿಸದ ಗಂಡಿನಿಂದ ದೌರ್ಜನ್ಯ: ಬಂಡಾಯ ಸಾಹಿತಿ ಡಾ. ಕಾಳೇಗೌಡ ಅಭಿಮತ

ಸುದ್ದಿ360 ದಾವಣಗೆರೆ, ನ.12: ಸ್ತ್ರೀಶೋಷಣೆ ಅವ್ಯಾಹತವಾಗಿ ನಡೆಯುತ್ತಲೇ ಬಂದಿದ್ದು, ಇಂದಿರಾ ಗಾಂಧಿ ಅವರನ್ನೂ ಬಿಟ್ಟಿಲ್ಲ ಎಂದು ಬಂಡಾಯ ಸಾಹಿತಿ, ಚಿಂತಕ ಡಾ. ಕಾಳೇಗೌಡ ನಾಗವಾರ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸೋದರಿ ನಿವೇದಿತಾ ಸಂಭಾಂಗಣದಲ್ಲಿ ಇಂದು ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ಸಾಹಿತ್ಯ ಮತ್ತು ಮಹಿಳಾ ಪರ ಚಿಂತನೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಪ್ರಧಾನಿ ಪಟ್ಟದಲ್ಲಿದ್ದಾಗಲೂ ಇಂದಿರಾಗಾಂಧಿಯವರಿಗೆ  ಕೆಲವು ದೇವಾಲಯ ಪ್ರವೇಶಿಸಲು ಆಗಲಿಲ್ಲ. ಇಂದಿರಾ ವಿಧವೆ ಮತ್ತು ಆಕೆಯ ಪತಿ ಅನ್ಯ ಧರ್ಮೀಯ ಎಂಬುದು ನಿರ್ಬಂಧಕ್ಕೆ ಕಾರಣವಾಗಿತ್ತು. ಹಾಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ದೇವಾಲಯ ಪ್ರವೇಶಕ್ಕೆ ನಿರ್ಬಂಧವಿದೆ ಎಂದು ತಿಳಿಸಿದರು.

ಅಯೊಧ್ಯೆಗೆ ಸೀತೆಯ ದೊಡ್ಡ ನಮಸ್ಕಾರ !?

ಅಯೋಧ್ಯೆಯಲ್ಲಿ ಏನೂ ಗಲಭೆ ಆಗದಿರಲಿ ಎಂದು ನಾವೆಲ್ಲಾ ಕೈ ಮುಗಿಯುತ್ತೇವೆ. ಆದರೆ, ಅಯೋಧ್ಯೆಗೆ ಕೈಮುಗಿದವರಲ್ಲಿ ಶ್ರೀರಾಮನ ಸತಿ ಸೀತೆ ಮೊದಲಿಗಳು. ರಾಮನನ್ನು ವರಿಸಿ ಅಯೋಧ್ಯೆ ಸೇರಿದ ದಿನದಿಂದಲೂ ಸೀತೆಗೆ ನೆಮ್ಮದಿ ಸಿಗದೇ ಅಯೋಧ್ಯೆಗೊಂದು ದೊಡ್ಡ ನಮಸ್ಕಾರ ಹಾಕಿದಳು.

ವಿವಾಹವಾದ ಹೊಸತರಲ್ಲೇ ರಾಮನೊಂದಿಗೆ ಕಾಡಿಗೆ ಹೋದಳು. ಬಳಿಕ ರಾವಣ ಅಪಹರಿಸಿದ. ಅಲ್ಲಿಂದ ಬಂದ ಬಳಿಕ ಅಗ್ನಿ ಪರೀಕ್ಷೆ. ಗರ್ಭವತಿಯಾಗಿದ್ದಾಗ ಶಂಕೆಗೊಳಪಟ್ಟು14 ವರ್ಷ ವನವಾಸ… ಹೀಗೆ ಒಂದಾದಮೇಲೊಂದು ಅಪಮಾನ, ಕಷ್ಟ ಅನುಭವಿಸಿದ ಸೀತೆ, ವನವಾಸ ಮುಗಿದ ಬಳಿಕ ರಾಮ ತನ್ನನ್ನು ಕರೆದೊಯ್ಯಲು ಬಂದಾಗ ಮಕ್ಕಳನ್ನು ಮಾತ್ರ ಕಳಿಸಿ ತಾನೆಂದೂ ಅಯೋಧ್ಯೆಗೆ ಕಾಲಿಡುವುದಿಲ್ಲ ಎಂದು ದೊಡ್ಡ ನಮಸ್ಕಾರ ಹಾಕಿದಳು. ಈ ಉಲ್ಲೇಖ ರಾಮಾಯಣದಲ್ಲಿದೆ ಎಂದು ಡಾ. ಕಾಳೇಗೌಡ ನಾಗವಾರ ತಿಳಿಸಿದರು.

ಪ್ರಶ್ನೆ ಕೇಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಣವಾಗಿದೆ. ಮಹಿಳೆಯರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಋಗ್ವೇದ ಕಾಲದಲ್ಲಿ ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳೇ ಅಲ್ಲಎಂದು ಹೇಳಲಾಗಿದೆ. ಇಂದಿಗೂ ಕೆಲವು ಕಡೆ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಹೆಣ್ಣು ಭ್ರೂಣ ಹತ್ಯೆ ಸೇರಿದಂತೆ ಏನೆಲ್ಲಾ ದೌರ್ಜನ್ಯಗಳು ಆಕೆಯ ಮೇಲೆ ನಿರಂತರವಾಗಿ ನಡೆಯುತ್ತಲೇ ಇದ್ದು, ಇಂದಿಗೂ ತುಳಿತಕ್ಕೊಳಗಾಗಿದ್ದಾಳೆ ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ದೇಶಕ್ಕೆ ಸಮಾನತೆಯ ಹಕ್ಕು ಪರಿಚಯಿಸಿದವರು. ಆದರೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಲು ಸಂಸತ್ ಒಪ್ಪಿಗೆ ನೀಡದಿದ್ದಾಗ, ಸ್ತ್ರೀಯರಿಗೆ ಸಂಪೂರ್ಣ ಸಮಾನತೆ ಕೊಡಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ್ದು ಒಂದು ಇತಿಹಾಸ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ. ಮಂಜಣ್ಣ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಿನ್ಸಿಪಾಲ್ ಪ್ರೊ. ಎ.ಎಸ್. ಶೈಲಜಾ ಕಾರ್ಯಕ್ರಮ ಉದ್ಘಾಟಿಸಿದರು. ಗಣಿತ ವಿಭಾಗದ ಮುಖ್ಯಸ್ಥ ಶಿವರಾಜ್, ಐಕ್ಯುಎಸಿ ಸಂಚಾಲಕ ಡಾ.ಎಂ.ಪಿ. ಭೀಮಪ್ಪ, ಉಪನ್ಯಾಸಕರಾದ ಡಾ.ಎನ್.ಎಂ. ಅಶೋಕ ಕುಮಾರ, ಟಿ.ಜಿ. ರಾಘವೇಂದ್ರ ಇತರರು ಇದ್ದರು.

ಹೆಣ್ಣು ಅತ್ಯಂತ ಕ್ರಿಯಾಶೀಲಾಳಾಗಿದ್ದು, ಆಕೆಯ ಕ್ರಿಯಾತ್ಮಕತೆಯನ್ನು ಸಹಿಸದ ಪುರುಷ ಆಕೆಯನ್ನು ದ್ವೇಷಿಸುತ್ತಾನಲ್ಲದೆ ದೌರ್ಜನ್ಯ ನಡೆಸುತ್ತಾನೆ

ಡಾ. ಕಾಳೇಗೌಡ ನಾಗವಾರ, ಬಂಡಾಯ ಸಾಹಿತಿ

admin

admin

Leave a Reply

Your email address will not be published. Required fields are marked *

error: Content is protected !!