ಸುದ್ದಿ360 ಹೊಸದಿಲ್ಲಿ ನ.13: ಮೃತಪಟ್ಟಿದ್ದ ವ್ಯಕ್ತಿಯನ್ನು ಬದುಕಿಸಲು ಎರಡು ತಿಂಗಳ ಮಗುವೊಂದನ್ನು ನರಬಲಿ ಕೊಡುವ ಪ್ರಯತ್ನ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿರುವುದು ಬೆಳಕಿಗೆ ಬ೦ದಿದೆ.
ಮೂಢನಂಬಿಕೆಗೆ ಗಂಟುಬಿದ್ದ ಆರೋಪಿ ಮಹಿಳೆ ಇತ್ತೀಚಿಗೆ ಮೃತಪಟ್ಟಿದ್ದ ಅಪ್ಪನನ್ನು ಬದುಕಿಸಲು ನರಬಲಿ ಕೊಡಲು ಮುಂದಾಗಿದ್ದಳು ಎಂದು ಪೊಲೀಸರ ಕಾರ್ಯಾಚರಣೆಯಿಂದ ತಿಳಿದು ಬಂದಿದೆ. ಸತ್ತ ಅಪ್ಪ ಮರಳಿ ಬದುಕಬೇಕೆಂದರೆ ಮಗುವೊಂದರ ನರಬಲಿಯಾಗಬೇಕು ಎಂದು ಜ್ಯೋತಿಷಿ ಹೇಳಿದ್ದರಂತೆ.
ಪೊಲೀಸರ ಯಶಸ್ವೀ ಕಾರ್ಯಾಚರಣೆ
ಪೊಲೀಸರ ಯಶಸ್ವೀ ಕಾರ್ಯಾಚರಣೆಯಿಂದ ಮಗುವನ್ನು ರಕ್ಷಿಸಲಾಗಿದೆ. ನರಬಲಿಗಾಗಿ ಮಗುವನ್ನು ಅಪಹರಿಸಿದ್ದ ಮಹಿಳೆಯನ್ನು ಶನಿವಾರ ಬಂಧಿಸಿರುವ ಪೊಲೀಸರು, ಎರಡು ದಿನದ ಹಿಂದೆ ದಿಲ್ಲಿಯ ಗರ್ಹಿ ಪ್ರದೇಶದಲ್ಲಿ ಎರಡು ತಿಂಗಳ ಮಗುವೊಂದನ್ನು ಅಪಹರಿಸಲಾಗಿತ್ತು. ಈ ಸಂಬಂಧ ಮಗುವಿನ ಪೋಷಕರು ದೂರು ನೀಡಿದ್ದರು. ಸಫರ್ ಜಂಗ್ ಆಸ್ಪತ್ರೆಯಲ್ಲಿ ಸಂಶಯಾಸ್ಪದವಾಗಿ ತನ್ನನ್ನು ಪರಿಚಯ ಮಾಡಿಕೊಂಡಿದ್ದ ಮಹಿಳೆಯೇ ಮಗು ಅಪಹರಿಸಿದ ಸಾಧ್ಯತೆ ಇರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು.
ಆರೋಪಿ ಮಹಿಳೆಯ ಬೆನ್ನತ್ತಿದ ಪೊಲೀಸರಿಗೆ ನರಬಲಿ ಯತ್ನದ ಸುಳಿವು ಸಿಕ್ಕಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಹಿಳೆಯ ಪತ್ತೆ ಜಾಲ ವಿಸ್ತರಿಸಿದ್ದರು. ಸಿಸಿಟಿವಿ ವಿಡಿಯೋ ಆಧರಿಸಿ ಮಹಿಳೆ ಅಡಗಿದ್ದ ಮನೆ ಪತ್ತೆ ಮಾಡಿ, ಅಹಪರಿಸಿದ ಮಗುವನ್ನು ವಶಕ್ಕೆ ಪಡೆದು, ಅಲ್ಲಿಯೇ ಜತೆಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಸುಗೂಸನ್ನು ರಕ್ಷಣೆ ಮಾಡಿದ್ದಾರೆ.