ಇಂದು, ಮುಂದು ಎಂದೆಂದೂ ಜನರೇ ನಮ್ಮ ಮಾಲೀಕರು : ಗಡಿಗುಡಾಳ್ ಮಂಜುನಾಥ್

“ಮನೆಯ ಬಾಗಿಲಿಗೆ ನಿಮ್ಮ ಸೇವಕ” ವಿಶೇಷ ಅಭಿಯಾನ

ಸುದ್ದಿ360 ದಾವಣಗೆರೆ, ನ.13: ಈ ಹಿಂದೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸ್ಥಳದಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವ ವಿನೂತನ ಕಾರ್ಯಕ್ರಮವನ್ನು ರೂಪಿಸಿ ವಾರ್ಡ್‍ ನಿವಾಸಿಗಳ ಮನಗೆದ್ದಿದ್ದ ಮಹಾನಗರ ಪಾಲಿಕೆಯ ಎಂಸಿಸಿ ಬಿ ಬ್ಲಾಕ್ ನ ಸದಸ್ಯ ಗಡಿಗುಡಾಳ್ ಮಂಜುನಾಥ್ ಈಗ ಪ್ರತಿ ಭಾನುವಾರ ಒಂದು ಮುಖ್ಯರಸ್ತೆಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಕಷ್ಟ ಕಾರ್ಪಣ್ಯ ವಿಚಾರಿಸಲು ಮುಂದಾಗಿದ್ದಾರೆ.

“ಮನೆಯ ಬಾಗಿಲಿಗೆ ನಿಮ್ಮ ಸೇವಕ” ಕಾರ್ಯಕ್ರಮ ಇಂದು ಎಂಸಿಸಿ ಬಿ ಬ್ಲಾಕ್‌ನ 2ನೇ ಮುಖ್ಯರಸ್ತೆಯಲ್ಲಿ ನಡೆಸಲಾಗಿದ್ದು, ಆ ಭಾಗದ ಸಾರ್ವಜನಿಕರೊಂದಿಗೆ ಸಂವಾದ ಮತ್ತು ಅಹವಾಲುಗಳನ್ನು ಸ್ವೀಕರಿಸಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಡಿಗುಡಾಳ್ ಮಂಜುನಾಥ್, ಜನರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಸ್ವಚ್ಚತೆ, ಎಲ್ಲೆಂದರಲ್ಲಿ ಗುಂಡಿ ಅಗೆದಿರುವುದರಿಂದ ಸಮಸ್ಯೆಯಾಗಿದೆ. ವಿದ್ಯುತ್ ದೀಪ, ರಾತ್ರಿ ವೇಳೆ ದೀಪ ಉರಿಯದೇ ಕತ್ತಲಾಗುತ್ತದೆ. ಇನ್ನು ಹಲವು ಸಮಸ್ಯೆಗಳು ಅನಾವರಗೊಂಡವು.‌ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಡಲಾಯಿತು. ಇನ್ನು ಕೆಲ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಇಂದು, ಮುಂದು ಎಂದೆಂದೂ ಜನರೇ ನಮ್ಮ ಮಾಲೀಕರು

ವಾರದಲ್ಲಿ ಒಂದು ದಿನ ತನ್ನ ವಾರ್ಡ್ ನ ಮುಖ್ಯರಸ್ತೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ಹಿತ‌ ಕಾಪಾಡುತ್ತೇನೆ. ಚುನಾವಣೆಯಲ್ಲಿ ಗೆಲ್ಲಿಸಿದ ಜನರು ಈಗಲೂ ನಮ್ಮ‌ ಮಾಲೀಕರು.‌ ಮುಂದೆಯೂ ಅವರೇ ಮಾಲೀಕರು.‌ ಸಮಸ್ಯೆಗೆ ಸ್ಪಂದಿಸುವುದು, ಸ್ಥಳದಲ್ಲಿ ಕೆಲ ಸಮಸ್ಯೆಗಳನ್ನು ಬಗೆಹರಿಸಿ ಜನರ ಸಮಸ್ಯೆ ಪರಿಹರಿಸುವುದು ನನ್ನ ಕರ್ತವ್ಯ.

ಗಡಿಗುಡಾಳ್ ಮಂಜುನಾಥ್, ವಿಪಕ್ಷ ನಾಯಕ.

ಪಾಲಿಕೆಯ ಆರೋಗ್ಯ ಇಲಾಖೆ ಇನ್ ಸ್ಪೆಕ್ಟರ್, ಅಧಿಕಾರಿಗಳು ಸೇರಿದಂತೆ ಬೇರೆ‌ ಬೇರೆ ವಿಭಾಗಗಳ ಅಧಿಕಾರಿಗಳು ಆಗಮಿಸಿದ್ದರು. ಚುನಾವಣಾ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಿಸುವ ಕಾರ್ಯವನ್ನು ಈ ವೇಳೆ ಮಾಡಲಾಯಿತು. ಇದೇ ವೇಳೆ ಮತದಾರರ ಪಟ್ಟಿಗೆ ಹೊಸ‌ ಮತದಾರರನ್ನು ಸೇರ್ಪಡೆಗೊಳಿಸುವ ಕಾರ್ಯ ಮಾಡಲಾಯಿತು. ವಾರದಲ್ಲಿ ಪ್ರತಿದಿನ ಹಸಿ ಕಸ, ಮಂಗಳವಾರ ಮತ್ತು ಶುಕ್ರವಾರ ಒಣ ಕಸ ತೆಗೆದುಕೊಳ್ಳಲು ಪಾಲಿಕೆಯಿಂದ ವಾಹನ ಬರಲಿದ್ದು, ಜನರು ಸಹಕರಿಸಬೇಕು. ಜೊತೆಗೆ ತ್ಯಾಜ್ಯ ನಿರ್ವಹಣೆ ಮಾಡಲು ಪಾಲಿಕೆಗೆ ಸಹಕರಿಸೋಣ ಎಂದು ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದರು.

ತ್ಯಾಜ್ಯ ಸಂಸ್ಕರಣಾ ಘಟಕ ಮಾಡಿದ್ದು, ಈ ಕಸ ನೀಡಿದರೆ ತ್ಯಾಜ್ಯಮುಕ್ತ ವಾರ್ಡ್ ಮಾಡಬಹುದು. ಎಲ್ಲೆಂದರಲ್ಲಿ ಯಾರೂ ಕಸ ಹಾಕಬೇಡಿ. ಕಸ ತೆಗೆದುಕೊಂಡು ಹೋಗಲು ಬರುವ ವಾಹನಗಳಿಗೆ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ನೀಡುವ ಮೂಲಕ ತ್ಯಾಜ್ಯಮುಕ್ತ ವಾರ್ಡ್ ಮಾಡಲು ಸಹಕರಿಸುವಂತೆ ಸಾರ್ವಜನಿಕರಲ್ಲಿ ಗಡಿಗುಡಾಳ್ ಮಂಜುನಾಥ್ ಮನವಿ ಮಾಡಿದರು.

2ನೇ ಮುಖ್ಯ ರಸ್ತೆಯ ಪ್ರತಿ ಮನೆಗೂ ಭೇಟಿ ನೀಡಿದ ಗಡಿಗುಡಾಳ್ ಮಂಜುನಾಥ್ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಜನರು ಸಹ ಕಾರ್ಪೊರೇಟರ್ ಅವರ ಜನಪರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!