ಸುದ್ದಿ360 ದಾವಣಗೆರೆ ಡಿ.25: ನಗರದಲ್ಲಿ ಕ್ರಿಸ್ಮಸ್ ಆಚರಣೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ವಿದ್ಯುತ್ ದೀಪಗಳ ಅಲಂಕಾರ, ಬಗೆಬಗೆಯ ಸಿಹಿ ತಿನಿಸುತಗಳ ಖಾದ್ಯ ತಯಾರಿಸಿ ಬಾಂಧವರಲ್ಲಿ ವಿನಿಮಯ ಮಾಡಿಕೊಂಡು ಸಂಭ್ರಮಿಸುವ ಮತ್ತು ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಏಸುಕ್ರಿಸ್ತನ ಜನ್ಮದಿನವನ್ನು ಆಚರಿಸಲಾಯಿತು.
ನಗರದ ಪ್ರಮುಖ ಕ್ರೈಸ್ತ ಧಾರ್ಮಿಕ ಕೇಂದ್ರಗಳಾಗಿರುವ ಪಿ.ಜೆ. ಬಡಾವಣೆಯ ಸಂತ ಥೋಮಸರ ದೇವಾಲಯ, ನಿಜಲಿಂಗಪ್ಪ ಬಡಾವಣೆಯ ಸಂತ ಜೋಸೆಫರ ಕ್ಯಾಥಲಿಕ್ ದೇವಾಲಯ, ಜಾಲಿನಗರದ ಜೆಎಂಬಿ ಚರ್ಚ್, ನಿಟ್ಟುವಳ್ಳಿಯ ಗೋಲ್ ಮಿನಿಸ್ಟ್ರೀಸ್ ಚರ್ಚ್, ಸೇರಿದಂತೆ ನಗರದಲ್ಲಿ ಕ್ರೈಸ್ತ ಬಾಂಧವರ ಮನೆಗಳು ವಿವಿಧ ಚರ್ಚ್ಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಚರ್ಚ್ ಆವರಣಗಳಲ್ಲಿ ಸಾಂತ ಕ್ಲಾಸ್ , ನಕ್ಷತ್ರಗಳ ಅಲಂಕಾರ, ಬೃಹತ್ ಕ್ರಿಸ್ಮಸ್ ಟ್ರೀ ಪ್ರತಿಕೃತಿ, ಗೋದಲಿ ಸೇರಿದಂತೆ ಏಸುಕ್ರಿಸ್ತನ ಪವಾಡಗಳನ್ನು ವಿವರಿಸುವ ಪ್ರತಿಕೃತಿಗಳನ್ನು ನಿರ್ಮಿಸಲಾಗಿದ್ದು, ಕ್ರೈಸ್ತ ಬಾಂಧವರು ಹಾಗೂ ಜನತೆ ಇವುಗಳ ವೀಕ್ಷಣೆಗೆ ಸಹಸ್ರಾರು ಸಂಖೆಯಲ್ಲಿ ಚರ್ಚ್ ಗೆ ಭೇಟಿ ನೀಡಿ ಕ್ಯಾಂಡಲ್ ಬೆಳಗಿಸುವ ಮೂಲಕ ತಮ್ಮ ಶ್ರದ್ಧಾಭಕ್ತಿಯನ್ನು ವ್ಯಕ್ತಪಡಿಸುತ್ತಿರುವುದು ಕಂಡುಬಂತು.
ನಗರದ ಪಿ.ಜೆ. ಬಡಾವಣೆಯ ಸಂತ ಥೋಮಸರ ದೇವಾಲಯದಲ್ಲಿ ಮಕ್ಕಳಿಂದಲೇ ಸಂತ ಕ್ಲಾಸ್ ಪ್ರತಿಕೃತಿ ಮೂಡಿಬಂದಿದ್ದು, ಸ್ನೋಮ್ಯಾನ್, ಜಿಂಕೆ, ಗೋದಲಿ, ಏಸುಕ್ರಿಸ್ತನ ಪವಾಡಗಳನ್ನು ವಿವರಿಸುವ ಪ್ರತಿಕೃತಿಗಳನ್ನು ನಿರ್ಮಿಸಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಚರ್ಚ್ ನಲ್ಲಿ ಶನಿವಾರ ರಾತ್ರಿ 12 ಗಂಟೆಯಿಂದ 1.30ರ ವರೆಗೆ ಪ್ರಾರ್ಥನೆ ನಡೆದಿದ್ದು, ಈ ವೇಳೆ ವಿಶ್ವಶಾಂತಿಗಾಗಿ ಹಾಗೂ ಕೋವಿಡ್ ಹರಡದಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕ್ರಿಸ್ತ ಜಯಂತಿ ಹಾಡುಗಳನ್ನು ಹಾಡಲಾಯಿತು ಎಂದು ಇಲ್ಲಿನ ಪಾದ್ರಿ ಅಂಥೋನಿ ನಜ್ರತ್ ಸುದ್ದಿ360ಗೆ ತಿಳಿಸಿದರು.