ಸುದ್ದಿ360 ಬೆಳಗಾವಿ, ಡಿ.28 : ರಾಜ್ಯದಲ್ಲಿ 11133 ಪೌರ ಕಾರ್ಮಿಕರ ನೌಕರಿಯನ್ನು ಖಾಯಂಗೊಳಿಸಲಾಗಿದೆ. ಕರ್ನಾಟಕದಲ್ಲಿ ಸುಮಾರು 42 ಸಾವಿರ ಪೌರಕಾರ್ಮಿಕರಿದ್ದು, ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಖಾಯಂ ನೇಮಕಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಳಗಾವಿಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು.
ಪೌರಕಾರ್ಮಿಕರಿಗೆ 2000 ರೂ. ಸಂಕಷ್ಟ ಭತ್ಯೆ :
ಆಯವ್ಯಯದಲ್ಲಿ ಪೌರಕಾರ್ಮಿಕರಿಗೆ 2000 ರೂ. ಸಂಕಷ್ಟ ಭತ್ಯೆಯನ್ನು ಅವರ ಆರೋಗ್ಯ ಹಿತರಕ್ಷಣೆಗೆ ನೀಡಲಾಯಿತು. ಪೌರಕಾರ್ಮಿಕರ ಹಿತರಕ್ಷಣೆಗಾಗಿ ಕಾನೂನನ್ನು ಬದಲಾಯಿಸಿ, ಈ ತೀರ್ಮಾನವನ್ನು ಕೈಗೊಳ್ಳುವ ಮೂಲಕ ಪೌರಕಾರ್ಮಿಕರಿಗೆ ನ್ಯಾಯ ಒದಗಿಸಲಾಗಿದೆ. ಅವರ ಗೌರವಯುತ ಜೀವನ ನಡೆಸುವ ಸಲುವಾಗಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.. ಈ ಜಿಲ್ಲೆಯಲ್ಲಿ 309 ಕ್ಲೀನರ್ ಗಳನ್ನು, 1437 ಲೋಡರ್ಸ್ ಗಳನ್ನು ಖಾಯಂಗೊಳಿಸಲಾಗಿದೆ. ಇದೇ ರೀತಿ ಉಳಿದವರನ್ನು ನೇಮಕಾತಿ ಪ್ರಕ್ರಿಯೆ ಕೈಕೊಳ್ಳಲಾಗುವುದು. ಅಲ್ಲಿಯವರೆಗೆ ಅವರ ಸೇವಾದರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ತೀರ್ಮಾನ ಸರ್ಕಾರ ಮಾಡಿದೆ ಎಂದರು.
ಪೌರ ಕಾರ್ಮಿಕರಲ್ಲ, ಪೌರ ನೌಕರರು
ಇಂತಹ ವಿಷಯದಲ್ಲಿಯೂ ರಾಜಕಾರಣ ಮಾಡಲಾಗುತ್ತದೆ. ನ್ಯಾಯ ಕೊಡುತ್ತಿರುವವರ ಮೇಲೆ ನಂಬಿಕೆಯಿಟ್ಟು ನಡೆದರೆ ಒಳ್ಳೆಯದಾಗುತ್ತದೆ.ಇನ್ನು ಮುಂದೆ ಪೌರ ಕಾರ್ಮಿಕರು ಎನ್ನದೇ , ಸರ್ಕಾರಿ ಪೌರ ನೌಕರರು ಎಂದು ಕರೆಯಲು ತೀರ್ಮಾನಿಸಲಾಗಿದೆ. ಈ ಹೆಸರು ನಿಮಗೆ ಸ್ವಾಭಿಮಾನ, ಅಸ್ಮಿತೆಯನ್ನು ನೀಡುತ್ತದೆ ಎಂದರು.
ಪೌರನೌಕಕರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ :
ಯಾವುದೇ ಕಾರಣಕ್ಕೂ ಪೌರನೌಕಕರ ಮಕ್ಕಳ ಶಿಕ್ಷಣಕ್ಕೆ ತಡೆಯುಂಟಾಗಬಾರದು. ಪೌರನೌಕರರ ಮಕ್ಕಳ ಶಿಕ್ಷಣಕ್ಕೆ ಯಾವುದೇ ಸಮಸ್ಯೆ ಬಂದರೂ ಸರ್ಕಾರ ಪರಿಹಾರ ಒದಗಿಸುತ್ತದೆ. ಅವರೂ ವಿದ್ಯಾವಂತರಾಗಿ ಎಲ್ಲರಂತೆಯೇ ಉನ್ನತ ಹುದ್ದೆಗಳಿಗೆ ಹೋಗಬೇಕು. ಈ ರೀತಿ ಸಾಮಾಜಿಕ ಬದಲಾವಣೆಯನ್ನು ತರಲಾಗುತ್ತದೆ. ಎಸ್ ಸಿ ಎಸ್ ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಈ ನಿರ್ಣಯಕ್ಕೆ ಗಟ್ಟಿಯಾಗಿ ನಿಲ್ಲಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪೌರನೌಕಕರ ಸೇವೆಯನ್ನು ಸರ್ಕಾರ ಗುರುತಿಸಿದೆ. ಬರುವ ದಿನಗಳಲ್ಲಿ ಪೌರನೌಕರರ ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಇದಕ್ಕೆ ಸರ್ಕಾರ ಎಲ್ಲ ಸಹಕಾರ ನೀಡುತ್ತದೆ ಎಂದರು.
ಪೌರನೌಕರರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿಶೇಷ ತರಬೇತಿ :
ಈ ವರ್ಷ ಮಾರ್ಚ್ ನಲ್ಲಿ ಪದವಿ ಪರೀಕ್ಷೆ ಬರೆಯುವ ಪೌರನೌಕರರ ಮಕ್ಕಳ ಸವಿವರ ಪಟ್ಟಿಯನ್ನು ನೀಡಲು ಸಂಬಂಧಪಟ್ಟ ಸಚಿವರಿಗೆ ಮುಖ್ಯಮಂತ್ರಿಗಳು ಸೂಚಿಸಿದರು. ಎಸ್ ಸಿ ಎಸ್ ಟಿ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿಯನ್ನು ನೀಡುವಂತೆ, ಪೌರನೌಕರರ ಮಕ್ಕಳು ಸಿಇಟಿ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿಶೇಷ ತರಬೇತಿಯನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದರು.
ಪೌರಕಾರ್ಮಿಕರ ನೋವನ್ನು ನಾನು ಬಲ್ಲೆ :
ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ನೀಡುವ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಇದರ ಬಗ್ಗೆ ಹಲವು ವರದಿಗಳು ಬಂದಿದ್ದರೂ, ಬೇಡಿಕೆ ಈಡೇರಿರಲಿಲ್ಲ. ನಗರ ಸ್ವಚ್ಛತೆ ಮಾಡುವುದರ ಕಷ್ಟವನ್ನು ನಾನು ಅರಿತಿದ್ದೇನೆ. ಯಾವ ವ್ಯಕ್ತಿ ಇನ್ನೊಬ್ಬರ ಸ್ವಚ್ಛತೆಯನ್ನೇ ನಿರ್ವಹಿಸುವ ಕೆಲಸವನ್ನು ಸತತವಾಗಿ ಮಾಡಿದಾಗ ಮಾನಸಿಕವಾಗಿ ಅನುಭವಿಸುವ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಈ ಮಾನಸಿಕ ಹಿಂಸೆಯಿಂದ ಪಾರಾಗಲು ನಿಮ್ಮದೇ ಆದ ರೀತಿಗಳನ್ನು ಕಂಡುಕೊಂಡಿದ್ದೀರಿ. ನಿಮ್ಮ ಜಾಗದಲ್ಲಿ ನಿಂತು ಯೋಚಿಸಿದಾಗ, ಬದುಕಿಗಾಗಿ ನಾನು ಏಕೆ ಇನ್ನೊಬ್ಬರ ಹೊಲಸನ್ನು ಸ್ವಚ್ಛಗೊಳಿಸಬೇಕು ಎಂಬ ಮೂಲಭೂತ ಪ್ರಶ್ನೆ ಏಳುತ್ತದೆ. ಇಂತಹ ಬದುಕನ್ನು ಬದುಕುವ ಅನಿವಾರ್ಯತೆ ಏಕೆ ಬಂದಿದೆ. ರಾಜ್ಯದ ದಲಿತ ನಾಯಕ ಬಸವಲಿಂಗಪ್ಪ, ಮಲ ಹೊರುವ ಪದ್ಧತಿಯನ್ನು ನಿಷೇದಿಸುವ ಕಾನೂನನ್ನು ತಂದ ಧೀಮಂತ ನಾಯಕ ಎಂದರು.
ಸರ್ಕಾರದ ದಿಟ್ಟ ನಿರ್ಧಾರಗಳು ಸಮಾಜದಲ್ಲಿ ಬದಲಾವಣೆ ತರುತ್ತದೆ :
ನಾವು ಅಧಿಕಾರದಲ್ಲಿದ್ದಾಗ ಅತ್ಯಂತ ತಳಹಂತದಲ್ಲಿರುವವರಿಗೆ ನ್ಯಾಯವನ್ನು ಕೊಡಬೇಕು. ಕಾನೂನಿನ ಅಡಚಣೆಯನ್ನು ಮುಂದಿಟ್ಟುಕೊಂಡು ಪೌರಕಾರ್ಮಿಕರಿಗೆ 40-50 ವರ್ಷಗಳಿಂದ ನ್ಯಾಯವನ್ನು ನೀಡಲಾಗಿರಲಿಲ್ಲ. ಸರ್ಕಾರದ ವ್ಯವಸ್ಥೆಯಲ್ಲಿ ಕೆಲಸ ಮಾಡಬಾರದೆಂದರೆ ನೂರಾರು ಕಾರಣಗಳನ್ನು ಹುಡುಕಬಹುದು. ಆದರೆ ಬಡವರಿಗೆ, ದೀನದಲಿತರಿಗೆ,ದುಡಿಯುವ ವರ್ಗದ ಏಳಿಗೆಗೆ ದಿಟ್ಟತನದ ನಿರ್ಧಾರಗಳನ್ನು ತೆಗೆದುಕೊಂಡಾಗ ಸಮಾಜದಲ್ಲಿ ದೊಡ್ಡ ಬದಲಾವಣೆಗಳನ್ನು ತರಬಹುದಾಗಿದೆ. ಸರ್ಕಾರದ ಈ ಆಶಯಕ್ಕೆ ಈ ನಿರ್ಣಯವೇ ಸಾಕ್ಷಿ. ಪೌರಕಾರ್ಮಿಕರ ಆರೋಗ್ಯ ರಕ್ಷಣೆ, ಮಕ್ಕಳ ಶಿಕ್ಷಣ, ಮನೆ ನಿರ್ಮಾಣಗಳಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಪೌರಕಾರ್ಮಿಕರ ಇವುಗಳ ಲಾಭವನ್ನು ಪಡೆಯಬೇಕು ಎಂದರು.
ಸಚಿವರಾದ ಗೋವಿಂದ ಕಾರಜೋಳ, ಎಂ.ಟಿ. ಬಿ.ನಾಗ ರಾಜ್, ಶಶಿಕಲಾ ಜೊಲ್ಲೆ, ಶಾಸಕ ದುರ್ಯೋಧನ ಐಹೊಳೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.