ಸುದ್ದಿ360 ದಾವಣಗೆರೆ,ಜ.05 : ವೇದ ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ಯಶಸ್ಸು ದೊರೆತಿದೆ. ಮಹಿಳೆಯರಿಗೆ ಉತ್ತಮ ಸಂದೇಶ ನೀಡುವ ಚಿತ್ರ ಇದು. ಮಹಿಳೆಯರು ಮಾತ್ರವಲ್ಲದೇ ಪುರುಷರು ಈ ಚಿತ್ರದಲ್ಲಿನ ಸಂದೇಶವನ್ನು ಸ್ವೀಕರಿಸಿದ್ದಾರೆ. ಇಡೀ ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಚಿತ್ರ ಇದಾಗಿದೆ. ಇವು ವೇದ ಚಿತ್ರ ಕುರಿತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ ಮಾತುಗಳು.
ವೇದ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಸಕ್ಸಸ್ ಆದ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್, ಚಿತ್ರದ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಹಾಗೂ ಚಿತ್ರದಲ್ಲಿ ನಟಿಸಿರುವ ಗಾನವಿ ಲಕ್ಷ್ಮಣ್, ಅದಿತಿ ಸಾಗರ್ ಒಳಗೊಂಡಂತೆ ಚಿತ್ರತಂಡ ನಗರದಲ್ಲಿ ವಿಜಯ ಯಾತ್ರೆ ನಡೆಸಿದರು.
ನಿಟುವಳ್ಳಿಯ ಗ್ರಾಮದೇವತೆ ಶ್ರೀದುಗಾಂಬಿಕಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತೆರೆದ ವಾಹನದಲ್ಲಿ ಆಗಮಿಸಿದ ಚಿತ್ರತಂಡ ಪ್ರಮುಖ ರಸ್ತೆಗಳ ಮೂಲಕ ಸಾಗಿ ಅಶೋಕ ಚಿತ್ರಮಂದಿರ ತಲುಪಿತು. ಈ ವೇಳೆ ನೆಚ್ಚಿನ ನಟ ಶಿವಣ್ಣರನ್ನು ನೋಡಲು ಅಭಿಮಾನಿಗಳ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು.
ನನ್ನ ಹೃದಯ ಬಿಚ್ಚಿ ನೋಡುದ್ರೆ ಬರೀ ಪ್ರೀತೀನೇ ಕಾಣುತ್ತೆ. . .
ಸ್ಟಾರ್ ವಾರ್ ಕುರಿತು ಮಾಧ್ಯಮದವರಿಗೆ ಹೆಚ್ಚೇನು ಪ್ರತಿಕ್ರಿಯಿಸಲು ಇಷ್ಟ ಪಡದ ಶಿವರಾಜ್ ಕುಮಾರ್, ನನ್ನದು ಯಾವಾಗಲೂ ತೆರದ ಹೃದಯ. ಅಭಿಮಾನಿಗಳ ಗಲಾಟೆ ಬೇಡ. ಇದು ಯಾರಲ್ಲೂ ನಡೆಯಬಾರದು. ಅತಿರೇಕದ ಅಭಿಮಾನ ಒಳ್ಳೆಯದಲ್ಲ. ನಮ್ಮ ಹೃದಯದ ತುಂಬಾ ಪ್ರೀತೀನೇ ತುಂಬಿಕೊಂಡಿದೆ ಎಂದರು.
ಮುಂದಿನ ಚಿತ್ರ ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಚಿತ್ರವನ್ನು ಪ್ರಭುದೇವ್ ಜೊತೆಗೆ ಮಾಡುತ್ತಿದ್ದೇನೆ. ಇನ್ನೊಂದು ಚಿತ್ರ ಶ್ರೀನು ನಿರ್ದೇಶನ ಮಾಡುತ್ತಿದ್ದು, ಸಂದೇಶ ನಾಗರಾಜ್ ನಿರ್ಮಾಣದ ಗೋಸ್ಟ್ ಚಿತ್ರದ ಚಿತ್ರೀಕರಣ ನಡೆಯುತ್ತಿವೆ.
ಅಪ್ಪಾಜಿಯ ಮಾತನ್ನು ನೆನೆದ ನಟ ನಾವು ಏನೇ ಪ್ರಯತ್ನ ಪಟ್ಟರು ಆಗೊಲ್ಲ. ಅದಾಗಿಯೇ ಆಗಬೇಕು. ಅದನ್ನು ನಾನು ನಂಬುತ್ತೇನೆ. ‘ಈಸೂರು ಧಂಗೆ’ ಚಿತ್ರ ಕಥೆ ಸಿದ್ದವಿದೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಒಮ್ಮೆ ಟೇಕ್ ಆಫ್ ಆದರೆ ಸರಿ ಹೋಗುತ್ತೆ ಎಂದರು.
ಚಿತ್ರದ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಸ್ವಂತ ಬ್ಯಾನರ್ ಅಡಿಯಲ್ಲಿ ವೇದ ಚಿತ್ರ ರೂಪಿಸಲಾಗಿದೆ. ಮಹಿಳೆಯರಿಗೆ ಉತ್ತಮ ಸಂದೇಶ ನೀಡಲಾಗಿದೆ. ವೇದ ಚಿತ್ರದ ಯಶಸ್ಸು ತುಂಬಾ ಖುಷಿ ತಂದಿದೆ. ಮುಂದೆ ಇನ್ನು ಹೆಚ್ಚಿನ ಚಿತ್ರಗಳನ್ನು ನಿರ್ಮಾಣ ಮಾಡುವ ಆಸೆ ಇದೆ. ಆದರೆ ಸದ್ಯಕ್ಕೆ ವೇದ ಚಿತ್ರದ ಬಗ್ಗೆ ಮಾತ್ರ ನೋಡಿಕೊಳ್ಳುತ್ತಿದ್ದೇವೆ ಎಂದರು.
ನಟಿ ಗಾನವಿ ಲಕ್ಷ್ಮಣ್ ಮಾತನಾಡಿ, ದಾವಣಗೆರೆಯಲ್ಲಿ ದೇವಿ ದರ್ಶನ ಮಾಡಿದ್ದು ಅದರಲ್ಲೂ ಶಿವರಾಜ್ ಕುಮಾರ್ ಮತ್ತು ಗೀತಾ ಮೇಡಂ ಅವರೊಂದಿಗೆ ಬಂದು ದೇವಿಯ ದರ್ಶನ ಮಾಡಿರುವುದು ತುಂಬಾ ಖುಷಿ ಕೊಟ್ಟಿದೆ. ವೇದ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ರಾಜಾದ್ಯಂತ ಉತ್ತಮ ಯಶಸ್ಸು ಕಾಣಬೇಕೆಂದು ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿರುವುದಾಗಿ ಹೇಳಿದರು. ನಟಿ ಅದಿತಿ ಸಾಗರ್ ದಾವಣಗೆರೆ ಬೆಣ್ಣೆ ದೋಸೆ ತಿಂದು ದಿನ ಪ್ರಾರಂಭಿಸಿದ್ದೇವೆ. ದೇವಿಯ ದರ್ಶನ ಮಾಡಿದ್ದೇವೆ. ವೇದ ಚಿತ್ರಕ್ಕೆ ಜನ ನೀಡಿರುವ ಪ್ರತಿಕ್ರಿಯೆಗೆ ತುಂಬ ಖುಷಿ ಕೊಟ್ಟಿದೆ ಎಂದರು.
ಈ ವೇಳೆ ಚಿತ್ರತಂಡ, ದಾವಣಗೆರೆ ಜಿಲ್ಲೆಯ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಮತ್ತಿತರರು ಇದ್ದರು.