ಕಾಂಗ್ರೆಸ್ನಿಂದ ಪ್ರತಿಭಟನೆ – ರಾಷ್ಟ್ರಪತಿಗಳಿಗೆ ಮನವಿ
ಸುದ್ದಿ360 ದಾವಣಗೆರೆ, ಜೂ.17: ಕೇಂದ್ರ ಬಿಜೆಪಿ ಸರಕಾರ ಇ.ಡಿ.ಯನ್ನು ದುರ್ಭಳಕೆ ಮಾಡಿಕೊಳ್ಳುತ್ತಿದ್ದು, ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಸೂಕ್ತ ಮಾರ್ಗದರ್ಶನ ನೀಡುವಂತೆ ಆಗ್ರಹಿಸಿ, ಕೆಪಿಸಿಸಿ ಜಿಲ್ಲಾ ಘಟಕ ಹಾಗೂ ಪಕ್ಷದ ಎಲ್ಲಾ ವಿಭಾಗಗಳ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿತು. ನಂತರ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ನಗರದ ಕೆಇಬಿ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಯದೇವ ವೃತ್ತ ತಲುಪಿ ಅಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಉಪವಿಭಾಗಾಕಾರಿ ಕಚೇರಿಗೆ ತೆರಳಿ, ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಸುಳ್ಳು ಮಾಹಿತಿಯನ್ನು ಹಿಡಿದುಕೊಂಡು ಪಕ್ಷದ ನಾಯಕರಾದ ರಾಹುಲ್ಗಾಂಧಿ ಮತ್ತು ಸೋನಿಯಾ ಗಾಂಧಿಯವರಿಗೆ ನೋಟಿಸ್ ಕೊಡುವ ಮೂಲಕ ಕೇಂದ್ರ ಸರ್ಕಾರ ರಾಜಕೀಯ ಕಿರುಕುಳ ನೀಡುತ್ತಿದೆ. ಬಿಜೆಪಿ ಸರ್ಕಾರ ದ್ವೇಶದ ರಾಜಕಾರಣ ಮಾಡುತ್ತಿದೆ. ನೇರವಾಗಿ ಹೋರಾಡಿ ಪ್ರತಿಪಕ್ಷಗಳನ್ನು ಸೋಲಿಸುವ ಧೈರ್ಯ ಇಲ್ಲದ ಬಿಜೆಪಿ, ಜಾರಿ ನಿರ್ದೇಶನಾಲಯ, ಐಟಿ ಮತ್ತು ಸಿಬಿಐ ರೀತಿಯ ಸಂಸ್ಥೆಗಳನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಈ ಸಂಸ್ಥೆಗಳ ಮೂಲಕ ಪ್ರತಿಪಕ್ಷಗಳ ನಾಯಕರಿಗೆ ನೋಟಿಸ್ ಜಾರಿಗೊಳಿಸಿ, ಮಾನಸಿಕ ಹಿಂಸೆ ನೀಡುತ್ತಿದೆ. ಪ್ರಸ್ತುತ ಇಡಿ ಮೂಲಕ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ವಿಚಾರಣೆ ನೋಟಿಸ್ ಜಾರಿಗೊಳಿಸಿರುವ ಬಿಜೆಪಿ ಸರಕಾರ ಗಾಂಧಿ ಕುಟುಂಬವನ್ನು ಮುಗಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಎಲ್ಲೆಲ್ಲಿ ಕಾಂಗ್ರೆಸ್ ವರ್ಚಸ್ಸು ಉತ್ತಮವಾಗಿದೆಯೋ ಅಲ್ಲಿನ ಪ್ರಮುಖ ನಾಯಕರ ವಿರುದ್ಧ ಇಡಿ, ಐಟಿ ಮೂಲಕ ನೋಟಿಸ್ ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಪಕ್ಷದ ಮತ್ತು ಅಲ್ಲಿನ ನಾಯಕರ ವರ್ಚಸ್ಸಿಗೆ, ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಕೇಂದ್ರ ಸರಕಾರದಿಂದ ನಡೆಯುತ್ತಿದೆ. ತನ್ನ ಹಿಡಿತದಲ್ಲಿರುವ ಸರಕಾರಿ ಸಂಸ್ಥೆಗಳ ಮೂಲಕ ಕಾಂಗ್ರೆಸ್ ನಾಯಕರನ್ನು ಬೆದರಿಸಿ, ಬಿಜೆಪಿಗೆ ಸೇರುವಂತೆ ಮಾಡುವುದೇ ಕೆಂದ್ರದ ಪ್ರಮುಖ ಉದ್ದೇಶವಾಗಿದೆ ಎಂದು ದೂರಿದರು.
ಕೇಂದ್ರ ಸರಕಾರವೇ ಹೊಣೆ – ಎಚ್ಚರ
ಮಾಜಿ ಸಚಿವ ಶಿವಮೂರ್ತಿ ನಾಯಕ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ತನ್ನ ಮುಂದೆ ಯಾವುದೇ ವಿರೋಧ ಪಕ್ಷ ಇರಬಾರದು ಎಂಬ ದುರುದ್ದೇಶದಿಂದ ಕೇಂದ್ರ ಬಿಜೆಪಿ ಸರಕಾರ, ಪ್ರತಿಪಕ್ಷಗಳನ್ನು ನಿರ್ನಾಮ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರನ್ನು ಸತತ ನಾಲ್ಕು ದಿನಗಳಿಂದ ವಿಚಾರಣೆಗೆ ಒಳಪಡಿಸಿ, ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಈ ದುರ್ವರ್ತನೆ ಹೀಗೆಯೇ ಮುಂದುವರಿದರೆ ಮುಂದೆ ಆಗುವ ಅನಾಹುತಗಳಿಗೆ ಕೇಂದ್ರ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ. ನೆಹರೂ ಕುಟುಂಬದ ವಿರುದ್ಧ ಇಡಿ, ಐಟಿ ದಾಳಿ ಮಾಡಿಸುವ ಮೂಲಕ ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ನೆಹರೂ ಕುಟುಂಬದ ವಿರುದ್ಧ ಹಗೆ ಸಾಧಿಸುತ್ತಿದೆ. ಸೋನಿಯಾ, ರಾಹುಲ್ ಗಾಂಧಿಗೆ ಇಡಿ ಮೂಲಕ ಸಮನ್ಸ್ ಜಾರಿಗೊಳಿಸಿರುವುದು ರಾಜಕೀಯ ಷಡ್ಯಂತ್ರ. ಬೆಲೆ ಏರಿಕೆ ನಿಯಂತ್ರಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ, ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅಭಿವೃದ್ಧಿ ಕಡೆ ಗಮನ ಹರಿಸುವ ಬದಲು ಸರಕಾರಿ ಸಂಸ್ಥೆಗಳನ್ನು ತನ್ನ ಅಂಗ ಸಂಸ್ಥೆಗಳನ್ನಾಗಿ ಮಾಡಿಕೊಂಡು ದುರಾಡಳಿತ ನಡೆಸುತ್ತಿದೆ ಎಂದು ಕಿಡಿಕಾರಿದರು.
ರಾಜ್ಯ ಬಿಜೆಪಿ ಸರಕಾರದ ಶೇ.೪೦ ಕಮಿಷನ್ ದಂಧೆ ಕುರಿತು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರು ಪ್ರಧಾನಿಗೆ ಪತ್ರ ಬರೆದು ವರ್ಷ ಕಳೆದರೂ ಅದಕ್ಕೆ ಉತ್ತರಿಸುವ ಪ್ರಯತ್ನವನ್ನು ನರೇಂದ್ರ ಮೋದಿ ಮಾಡಿಲ್ಲ. ಬೆಳಗಾವಿ ಗುತ್ತಿಗೆದಾರ ಸಚಿವರೊಬ್ಬರ ಮೇಲೆ ಕಮಿಷನ್ ಆರೋಪ ಹೊರಿಸಿ, ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆಯೂ ಸರಕಾರ ತನಿಖೆ ನಡೆಸಿ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಪಾಲಿಕೆ ಪ್ರತಿಪಕ್ಷದ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಪಾಲಿಕೆ ಸದಸ್ಯ ಎ. ನಾಗರಾಜ್, ಯುವ ಕಾಂಗ್ರೆಸ್ನ ಮೈನುದ್ದೀನ್, ವಿನಾಯಕ್ ಪೈಲ್ವಾನ್, ಸೈಯದ್ ಚಾರ್ಲಿ, ಉದಯ್ಕುಮಾರ್, ರೇವಣಸಿದ್ದಪ್ಪ ಹರಿಹರ, ರುದ್ರೇಶ್ ಎಸ್.ಎಂ., ಶುಭಮಂಗಳ, ರಾಜೇಶ್ವರಿ, ಕವಿತಾ ಚಂದ್ರಶೇಖರ್, ಸವಿತಾಬಾಯಿ, ಪ್ರಕಾಶ್ ಪಾಟೀಲ್ ಇತರರಿದ್ದರು.