ಕುಟುಂಬ ಸಮೇತ ಕ್ರಾಂತಿಗಿಳಿದ ಪಿಂಚಣಿ ವಂಚಿತ ನೌಕರರು
ಸುದ್ದಿ360 ದಾವಣಗೆರೆ ಜ.12: ನಾಡೆಲ್ಲ ಸಂಕ್ರಾಂತಿಯ ಸಡಗರಕ್ಕೆ ಸಜ್ಜಾಗುತ್ತಿದ್ದರೆ ಹತ್ತಿಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಅನುದಾನಿತ ಶಾಲೆ ಕಾಲೇಜುಗಳ ಪಿಂಚಣಿ ವಂಚಿತ ನೌಕರರು ತಮ್ಮ ಸೇವೆಗೆ ಜೀವನದ ಕೊನೆಯಘಟ್ಟದಲ್ಲಿ ಪಿಂಚಣಿಯ ಬೆಳ್ಳಿಗೆರೆ ಮೂಡಲಿ ಎಂಬ ಉದ್ದೇಶದಿಂದ ಕ್ರಾಂತಿಗೆ ಮುಂದಡಿ ಇಟ್ಟಿದ್ದಾರೆ.
ಈ ಕುರಿತು ಇಂದು ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎನ್.ವೈ.ಹನುಮಂತರೆಡ್ಡಿ ಮಾಹಿತಿ ನೀಡಿದರು. ಜ.14ರಂದು ಬೆಳಗ್ಗೆ 10 ಗಂಟೆಗೆ ಅನುದಾನಿತ ಶಾಲೆ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನದಲ್ಲಿಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಅನುದಾನಿತ ಶಾಲೆ, ಕಾಲೇಜುಗಳ 60,000ಕ್ಕೂ ಹೆಚ್ಚು ನೌಕರರಿದ್ದು, ಇವರಿಗೆ ಇದುವರೆಗೂ ಯಾವುದೇ ರೀತಿಯ ಪಿಂಚಣಿ ಸೌಲಭ್ಯ ಕಲ್ಪಿಸಿಲ್ಲ. ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಈ ಬಗ್ಗೆ ರಾಜ್ಯ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.
ಈ ಹಿಂದೆ ಬಿ.ಎಸ್. ಯಡಿಯೂರಪ್ಪ, ತಾವು ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ಪಿಂಚಣಿ ಸೌಲಭ್ಯ ಕಲ್ಪಿಸಲು ಆದೇಶ ಹೊರಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಸಿಎಂ ಆದ ಬಳಿಕ ಎಷ್ಟು ಮನವಿ ಸಲ್ಲಿಸಿದರೂ ಭರವಸೆ ಈಡೇರಿಸಲಿಲ್ಲ. ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳಿಗೂ ತೆರಳಿ ಅವರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಯಾವುದೇ ಪ್ರಯತ್ನಗಳು ಫಲ ನೀಡುತ್ತಿಲ್ಲ.
ಅನುದಾನಿತ ಪಿಂಚಣಿ ವಂಚಿತ ನೌಕರರ ಕುಟುಂಬದ ನಡೆ ಬೆಂಗಳೂರು ಫ್ರೀಡಂ ಪಾರ್ಕ್ ಕಡೆ
ರಾಜ್ಯದ ಅನುದಾನಿತ ಶಾಲೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರಿಗೆ ನಿಶ್ಚಿತ ಪಿಂಚಣಿ (ಹಳೇ ಪಿಂಚಣಿ ಯೋಜನೆ) ಮತ್ತು ಜ್ಯೋತಿ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯಗಳನ್ನು ಜಾರಿಗೊಳಿಸಲು ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನದಲ್ಲಿ ಅ.7ರಿಂದ ಸಂಘದ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತಿದೆ. ಜ.14ರಂದು ಈ ಧರಣಿ 100 ದಿನ ಪೂರೈಸಲಿದೆ. ಇದುವರೆಗೂ ಸರಕಾರ ನಮ್ಮ ಬೇಡಿಕೆ ಈಡೇರಿಸಲು ಕಾಳಜಿ ತೋರುತ್ತಿಲ್ಲ. ಹೀಗಾಗಿ, ಅಂದು ರಾಜ್ಯದ ಅನುದಾನಿತ ಪಿಂಚಣಿ ವಂಚಿತ ನೌಕರರು ಸಾವಿರಾರು ಸಂಖ್ಯೆಯಲ್ಲಿ ತಮ್ಮ ಕುಟುಂಬ ಸದಸ್ಯರ ಸಮೇತ `ಅನುದಾನಿತ ಪಿಂಚಣಿ ವಂಚಿತ ನೌಕರರ ಕುಟುಂಬದ ನಡೆ ಬೆಂಗಳೂರು ಫ್ರೀಡಂ ಪಾರ್ಕ್ ಕಡೆ’ ಎಂಬ ಘೋಷ ವಾಕ್ಯದೊಂದಿಗೆ ಹೋರಾಟ ಆರಂಭಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದೊಡ್ಡಮನಿ ಕೆಂಚಪ್ಪ, ಎನ್. ಸಿದ್ದಪ್ಪ, ಕೆ.ಜಿ. ಸೌಭಾಗ್ಯಮ್ಮ, ಪಿ.ಎಚ್. ದಾದಾಪೀರ್ ನವಿಲೆಹಾಳ್, ಡಿ.ಜಿ. ರುದ್ರಪ್ಪ, ತಮ್ಮನಗೌಡ ಇತರರು ಇದ್ದರು.