ಸುದ್ದಿ360 ಮಂಗಳೂರು ಜ.12: ಮುಕ್ಕ ಗ್ರೂಪ್ ಆಫ್ ಕಂಪೆನೀಸ್ ನ ಮೊಹಮ್ಮದ್ ಹ್ಯಾರಿಸ್ ಅವರ ಹೆಸರಿನಲ್ಲಿದ್ದ 17.34 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಹ್ಯಾರಿಸ್ ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ವಶಪಡಿಸಿಕೊಂಡಿರುವ ಜಾರಿ ನಿರ್ದೇಶನಾಲಯ, ಮಂಗಳೂರಿನಲ್ಲಿರುವ ಎರಡು ಫ್ಲ್ಯಾಟ್ ಗಳು ಮತ್ತು ಒಂದು ಕೈಗಾರಿಕಾ ನಿವೇಶನ ವಶಕ್ಕೆ ಪಡೆದಿದೆ.
ಹ್ಯಾರಿಸ್ ಅವರು ಫೆಮಾ (ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ) ನಿಬಂಧನೆಗಳನ್ನು ಉಲ್ಲಂಘಿಸಿ ವಿದೇಶದಲ್ಲಿ ಸ್ಥಿರಾಸ್ತಿ, ವ್ಯಾಪಾರ ಘಟಕಗಳನ್ನು ಹೊಂದಿದ್ದಲ್ಲದೆ, ವಿದೇಶೀ ವಿನಿಮಯ ವ್ಯವಹಾರಗಳನ್ನು ನಡೆಸಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಇಡಿ ದಾಳಿ ನಡೆಸಿತ್ತು. ವಿದೇಶದಲ್ಲಿ ಫ್ಲ್ಯಾಟ್, ವಿದೇಶಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಮತ್ತು ಯುಎಇಯಲ್ಲಿ ವಿದೇಶಿ ವ್ಯಾಪಾರ ಘಟಕದಲ್ಲಿ ಹೂಡಿಕೆ ಹೊಂದಿದ್ದು ಅದರ ಒಟ್ಟು ಆಸ್ತಿ ಭಾರತೀಯ ಲೆಕ್ಕಾಚಾರದ ಪ್ರಕಾರ 17.34 ಕೋಟಿ ರೂ. ಆಗಿದೆ. ಇದು, ಫೆಮಾ ಕಾನೂನು ಉಲ್ಲಂಘನೆಯಾಗಿದೆ. ಕಾಯಿದೆ ಪ್ರಕಾರ ವಿದೇಶದಲ್ಲಿ ಮಾಡಿದ ನಿಯಮ ಉಲ್ಲಂಘನೆಯ ಮೊತ್ತದ ಆಸ್ತಿಯನ್ನು ಭಾರತದೊಳಗೆ ವಶಪಡಿಸಿಕೊಳ್ಳಲು ಇಡಿಗೆ ಅಧಿಕಾರವಿರುವುದರಿಂದ ಈ ದಾಳಿ ನಡೆದಿದೆ.