ಸುದ್ದಿ360 ದಾವಣಗೆರೆ ಜ.13: ಯೋಗಥಾನ್ 2022ರ ಗಿನ್ನಿಸ್ ವಿಶ್ವ ದಾಖಲೆ ಕಾರ್ಯಕ್ರಮ ಜ.15ರಂದು ಬೆಳಗ್ಗೆ 6 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ದಾವಣಗೆರೆಯ ಎಂಟು ಸಾವಿರಕ್ಕೂ ಅಧಿಕ ಯೋಗಪಟುಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಗವನ್ನು ಕ್ರೀಡೆಯೆಂದು ಪರಿಗಣಿಸಿ ಆದೇಶ ಹೊರಡಿಸಿದ್ದು, ಯೋಗದ ಮಹತ್ವ ಕುರಿತು ಅರಿವು ಮೂಡಿಸಲು ಮತ್ತು ರೋಗಮುಕ್ತ ಕರ್ನಾಟಕವನ್ನಾಗಿ ರೂಪಿಸಲು ಯೋಗಥಾನ 2022 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕ ಕಾಲದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಸೇರಿ ಯೋಗಾಭ್ಯಾಸ ಮಾಡುವ ಮೂಲಕ ಗಿನ್ನಿಸ್ ವಿಶ್ವದಾಖಲೆಗೆ ಪ್ರಯತ್ನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆಯುಷ್ ಇಲಾಖೆ, ಆಯುಷ್ ಟಿ.ವಿ., ಜಿಲ್ಲಾ ಯೋಗ ಒಕ್ಕೂಟ ದಾವಣಗೆರೆ ಇವರ ಸಹಯೋಗದಲ್ಲಿ ಯೋಗಥಾನ್ 2022 ಕಾರ್ಯಕ್ರಮ ರೂಪುಗೊಂಡಿರುವುದಾಗಿ ತಿಳಿಸಿದರು.
ಈಗಾಗಲೇ ಆನ್ಲೈನ್ (https://www.yogathon2022.com) ಮೂಲಕ ಜಿಲ್ಲೆಯ 16 ಸಾವಿರಕ್ಕೂ ಹೆಚ್ಚು ಮಂದಿ ಯೋಗಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ದಾವಣಗೆರೆ ನಗರದ ಯೋಗಪಟುಗಳು ಸೇರಿದಂತೆ 8ರಿಂದ 10 ಸಾವಿರ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಆನ್ಲೈನ್ ನೋಂದಣಿ ಮಾಡಿಕೊಂಡವರ ಮೊಬೈಲ್ಗೆ ಕಳಿಸಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ರೀಡಾಂಗಣ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ.
ಕ್ರೀಡಾಂಗಣಕ್ಕೆ ಒಂದೇ ಪ್ರವೇಶಧ್ವಾರ ಮತ್ತು ಒಂದೇ ನಿರ್ಗಮನದ ದ್ವಾರವನ್ನು ಕಲ್ಪಿಸಿದ್ದು, ಕ್ರೀಡಾಂಗಣ ಸಂಪೂರ್ಣ ಗ್ರೀನ್ ಮ್ಯಾಟ್ ಅಳವಡಿಸಲಾಗಿರುತ್ತದೆ. ಕ್ರೀಡಾಂಗಣದ ಒಳಗೆ ಒಂದು ಮುಖ್ಯ ವೇದಿಕೆ ಹಾಗೂ 20 ಉಪ ವೇದಿಕೆಗಳು ಇರಲಿವೆ.
ಇದರೊಂದಿಗೆ ಸೌಂಡ್ ಸಿಸ್ಟಮ್, ಬ್ಯಾರಿಕೇಡ್, ಸಿಸಿಟಿವಿ ಕ್ಯಾಮೆರಾ ಮತ್ತು ರೆಕಾರ್ಡಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ 50 ಯೋಗ ಪಟುಗಳಿಗೆ ಒಬ್ಬ ಮೇಲ್ವಿಚಾರಕರು ಹಾಗೂ ಪ್ರತಿ ಸಾವಿರ ಯೋಗ ಪಟುಗಳಿಗೆ ಒಬ್ಬ ತರಬೇತುದಾರರನ್ನು ನೇಮಿಸಲಾಗಿದೆ. ಸೂಕ್ತ ಪೊಲೀಸ್ ಬಂದೋಬಸ್ತಿನೊಂದಿಗೆ ಯೋಗಥಾನ್ ನಡೆಯಲಿದ್ದು, ಪ್ರಥಮ ಚಿಕಿತ್ಸಾ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಹಾಗೂ ಲಘು ಉಪಹಾರದ ವ್ಯವಸ್ಥ ಮಾಡಲಾಗಿದೆ. ಭಾಗವಹಿಸಲು ವಯಸ್ಸಿನ ಮಿತಿ ಇರುವುದಿಲ್ಲ. ಆದರೆ, ಯುವಜನತೆ ಹಾಗೂ ವಿದ್ಯಾರ್ಥಿಗಳೇ ಹೆಚ್ಚಾಗಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಬೆಳಗ್ಗೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೇಂದ್ರ ಪರಿಹಾರ ಸಮಿತಿ ಸದಸ್ಯ ಬಸವರಾಜ ನಾಯಕ, ಮಹಾಪೌರರಾದ ಆರ್. ಜಯಮ್ಮ ಗೋಪಿನಾಯ್ಕ, ದೂಡ ಅಧ್ಯಕ್ಷ ಎ.ವೈ. ಪ್ರಕಾಶ್ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಆಯುಷ್ ಇಲಾಖೆಯ ಶಂಕರಲಿಂಗೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರವಿಚಂದ್ರ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಅಂತಾರಾಷ್ಟ್ರೀಯ ಯೋಗಪಟು ಪರಶುರಾಮಪ್ಪ, ಅಂತಾರಾಷ್ಟ್ರೀಯ ತೀರ್ಪುಗಾರ ತೀರ್ಥರಾಜ್, ಡಾಕ್ಟರೇಟ್ ಪುರಸ್ಕೃತರಾದ ಕೆ. ಜೈಮುನಿ ಸೇರಿದಂತೆ ಜಿಲ್ಲೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.