ಸುದ್ದಿ360 ಕಲಬುರಗಿ ಜ.13: ಸಿದ್ಧರಾಮಯ್ಯನವರನ್ನು ಕೋಲಾರದಲ್ಲಿ ಕಣಕ್ಕಿಳಿಸುವ ಮೂಲಕ ಅವರ ಪಕ್ಷದವರೇ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಅವರು ಜಿಲ್ಲೆಯ ಕಡಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ಧರಾಮಯ್ಯರಿಗೆ ಕೋಲಾರ ಕ್ಷೇತ್ರ ಸೇಫ್ ಅಲ್ಲ. ಅವರಿಗೆ ಅಲ್ಲಿ ನಿಲ್ಲುವಂತೆ ಯಾರು ಒತ್ತಡ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಸ್ವತಃ ಕೋಲಾರದಲ್ಲಿ ಸುತ್ತಾಡಿ, ಅಲ್ಲಿಯ ಜನರ ಭಾವನೆ ಅರಿತುಕೊಂಡಿದ್ದೇನೆ. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಲಿ ಅಥವಾ ನಾಯಕರಿಗಾಗಲಿ ಮತ ಪಡೆಯುವ ಶಕ್ತಿ ಇಲ್ಲ. ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ನಿಲ್ಲಿಸಲು ಹೊರಟಿದ್ದಾರೆ ಎಂದರು.
ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, 3ಬಿಯನ್ನು 2ಡಿಗೆ ಘೋಷಣೆ ಮಾಡಿ ರಂಗ ಎನ್ನುವ ಹೆಸರು ಮಂಗ ಮಾಡಿದ್ದಾರೆ. ಇವರು ಮೂಗಿಗೆ ತುಪ್ಪ ಸವರಿಲ್ಲ. ಬದಲಾಗಿ, ಹಣೆ ಮೇಲೆ ಸುರಿದು ವಾಸನೆ ಸಹ ಬಾರದಂತೆ ಮಾಡಿದ್ದಾರೆ ಎಂದ ಅವರು, ಮೀಸಲಾತಿ ವಿಚಾರದಲ್ಲಿ ರಾಜ್ಯ ಸಕಾ೯ರ ಮೋಸ ಮಾಡಿದೆ ಎಂದರು.
ರಾಜ್ಯಕ್ಕೆ ನರೇಂದ್ರ ಮೋದಿ ಬಂದಿರುವುದಕ್ಕೆ ಕಾಂಗ್ರೆಸ್, ಜೆಡಿಎಸ್ ನಲ್ಲಿ ಭಯ ಶುರುವಾಗಿದೆ ಎಂಬ ಸಿಪಿ ಯೋಗೇಶ್ವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನರೇಂದ್ರ ಮೋದಿ ಬಂದರೆ, ನಮಗೆ ಯಾವ ಭಯವು ಇಲ್ಲ. ರಾಜ್ಯ ಸಕಾ೯ರವಾಗಲಿ, ಕೇಂದ್ರ ಸರ್ಕಾರವಾಗಲಿ ಯಾವ ಯೋಜನೆಗಳನ್ನು ಜನರಿಗೆ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಅವರಿಗೇ ಭಯವಾಗಬೇಕು ಎಂದರು.
ಹುಬ್ಬಳ್ಳಿಯಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಸಹ ಬಳಸದೇ ಸ್ವಾಮಿ ವಿವೇಕಾನಂದರ ಕಾಯ೯ಕ್ರಮ ಮಾಡಿರುವುದಾಗಿ ಮಾದ್ಯಮಗಳಲ್ಲಿ ನೋಡಿದ್ದೇನೆ. ಬಿಜೆಪಿ ಪಾಲಿಗೆ ಇದು ಕೊನೆಯ ಚುನಾವಣೆ ಆಗಲಿದೆ ಎಂದರು.