ಸ್ಯಾಮ್ ಸನ್ ಡಿಸ್ಟಿಲರಿಯಲ್ಲೇನು ನಂದಿನಿ ಹಾಲು ತಯಾರಿಸುತ್ತಿದ್ದರಾ!?

ದಾವಣಗೆರೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಪ್ರಶ್ನೆ

ಸುದ್ದಿ360 ದಾವಣಗೆರೆ ಜ.18 ನಾವು ಬುದ್ದಿಹೀನರೇ ಹಾಗಾಗಿಯೇ ನಾವು ವನ್ಯ  ಜೀವಿಗಳ ತಂಟೆಗೆ ಹೋಗಿಲ್ಲ. ಬುದ್ದಿವಂತರು ಅವುಗಳನ್ನು ತಮ್ಮ ಫಾರ್ಮ್ ಹೌಸ್‍ನಲ್ಲಿ ಇಟ್ಟುಕೊಂಡಿದ್ದರು. ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಳ್ಳುವವರು ಬುದ್ದಿವಂತಿಕೆಯಿಂದ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಕುಟುಕಿದ್ದಾರೆ.

ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವನ್ಯ ಜೀವಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ  ಎಸ್ ಎಸ್ ಮಲ್ಲಿಕಾರ್ಜುನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು ಹೀಗೆ.

ಹಿರಿಯರಾದ ಶಾಮನೂರು ಶಿವಶಂಕರಪ್ಪರ ಬಗ್ಗೆ ನಮಗೆ ಅತೀವ ಗೌರವವಿದೆ. ಆದರೆ ಹಿರಿತನವುಳ್ಳವರ ಬಾಯಲ್ಲಿ ಬರುತ್ತಿರುವ ಮಾತುಗಳು ನಮ್ಮೆಲ್ಲ ಹಿರಿಯ ರಾಜಕಾರಣಿಗಳಿಗೆ ಮುಜುಗರವನ್ನುಂಟು ಮಾಡುತ್ತಿದೆ.

ಬ್ರಾಂಡಿ, ಕಳ್ಳಬಟ್ಟಿ, ಗುಟ್ಕಾ ಮಾರೋದು, ಇಸ್ಪೀಟ್ ಆಡಿಸೋದನ್ನು ನಿಲ್ಲಿಸಿ ನಾಲ್ಕು ಹಸು ಸಾಕಿ ತೋರಿಸಲಿ ಎಂದು ಆಪಾದಿಸಿರುವ  ಶಾಮನೂರು ಶಿವಶಂಕರಪ್ಪನವರು  ತಮ್ಮ ಕುಟುಂಬದ  ಇತಿಹಾಸವನ್ನು ಮರತಂತಿದೆ ಎಂದು ಹೇಳಿದ ಯಶವಂತರಾವ್ ಜಾಧವ್, “ಈ ಹಿಂದೆ ಶಾಮನೂರು ಶಿವಶಂಕರಪ್ಪರ ಹೆಸರಿನಲ್ಲಿ ಸ್ಯಾಮ್ ಸನ್ ಡಿಸ್ಟಿಲರಿ ಯೊಂದನ್ನು ತೆಗದು ಅಲ್ಲಿ ತಾವೇನು ನಂದಿನಿ ಹಾಲು ತಯಾರಿಸುತ್ತಿದ್ದಿರಾ ಎಂದು ಪ್ರಶ್ನಿಸಿದ್ದಾರೆ?  ಹಾಗೆಯೇ ಅಲ್ಲಿ ತಯಾರಾದ ಬ್ರಾಂದಿ ಕುಡಿದ ಒಬ್ಬ ಕೂಲಿ ಕಾರ್ಮಿಕನ ಸಾವು ಮರೆತಂತಿದೆ. ಈ ಪ್ರಕರಣವನ್ನು ಪ್ರಕಟಿಸಿದ ಪತ್ರಿಕೆಯ ಸಂಪಾದಕರೊಬ್ಬರನ್ನು ಪೊಲೀಸ್ ಸ್ಟೇಷನ್ನಲ್ಲಿ ಚಪ್ಪಲಿಯಿಂದ ಹೊಡೆದದ್ದು ಮರೆತಂತಿದೆ. ಇಂತಹ ಹಿನ್ನೆಲೆಯುಳ್ಳವರು ಬಿಜೆಪಿಯವರ ಮೇಲೆ ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.

ಕುರಿ, ಆಕಳು ಸಾಕಿದ ಯಾವುದೇ ವ್ಯಕ್ತಿ ವಿರುದ್ಧ ಕೇಸ್ ದಾಖಲಿಸಿರುವ ಇತಿಹಾಸವೇ ಇಲ್ಲ. ಅಂತದ್ದರಲ್ಲಿ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತು ಕೆಲಸಗಾರರಾದ ಸಂಪಣ್ಣ ಮತ್ತು ಕರಿಬಸಯ್ಯರ ಮೇಲೆ  ಅರಣ್ಯ ಅಧಿಕಾರಿಗಳು ಕೇಸು ದಾಖಲಿಸಿದಾಗ ಕುರಿ, ಹಸು ಸಾಕಿರುವ ನೀವು ಅದರ ವಿರುದ್ಧ ಹೋರಾಡುವುದನ್ನು ಬಿಟ್ಟು ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಏಕೆ ತಂದಿರಿ ಎಂದು ಕುಟುಕಿದರು.

ನಮ್ಮ ಮುಖಂಡರು ಮತ್ತು ಸರ್ಕಾರದ ಬಗ್ಗೆ ನಮಗೆ ವಿಶ್ವಾಸವಿದೆ. ಕಾರ್ಯಕರ್ತರ ಹೋರಾಟಕ್ಕೆ ಅವರ ಸಂಪೂರ್ಣ ಬೆಂಬಲವಿದೆ. ಹಾಗಾಗಿಯೇ ನಾವು ಗಟ್ಟಿಯಾಗಿ ನಿಂತಿದ್ದೇವೆ  ಎಂದರು.

ಲೋಕಿಕೆರೆ ನಾಗರಾಜ್, ಆನಂದ ರಾವ್ ಶಿಂಧೆ ಇವರು ಮಾತನಾಡಿ, ಈ ಹೋರಾಟದಲ್ಲಿ ಯಶವಂತರಾವ್ ಜಾಧವ್ ಮಾತ್ರ ಇಲ್ಲ, ಪಕ್ಷದ ಕಾರ್ಯಕರ್ತರೆಲ್ಲರೂ ಇದ್ದೇವೆ. ನಮ್ಮ ಪರವಾಗಿ ಜಾಧವ್ ಅವರು ಮಾತನಾಡುತ್ತಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸಮಜಾಯಿಶಿ ನೀಡಿದರು.

ದೃತರಾಷ್ಟ್ರ ಪ್ರೇಮ

ಹಿಂದೆ ಮಹಾಭಾರತ ಕಾಲದಲ್ಲಿ ದೃತರಾಷ್ಟ್ರ ತನ್ನ ಮಗನ ಮೇಲಿನ ಕುರುಡು  ಪ್ರೇಮದಿಂದ ಆದ ಗತಿಯನ್ನು ನಾವು ಓದಿ ತಿಳಿದಿದ್ದೇವೆ. ಹೀಗಿರುವಾಗ ಮಗನ ಮೇಲಿನ ಕರುಡು ಪ್ರೇಮದಿಂದ ಹೊರಬಂದು ಬುದ್ದಿಹೇಳುವ ಕೆಲಸವಾಗಲಿ ಎಂದು ಯಶವಂತರಾವ್ ಜಾಧವ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದಾವಣಗೆರೆ ದಕ್ಷಿಣ ಮಂಡಲದ ಅಧ್ಯಕ್ಷರಾದ ಆನಂದರಾವ್ ಶಿಂಧೆ, ಜಿಲ್ಲಾ ರೈತ ಮೋರ್ಚ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೋಗಿ ಶಾಂತಕುಮಾರ್, ಬಿಜೆಪಿ ಮುಖಂಡರಾದ ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್ ರಾಜನಹಳ್ಳಿ ಶಿವಕುಮಾರ್ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!