ಜ.21: ಬಿಜೆಪಿಯ ಬೂತ್ ವಿಜಯ ಸಂಕಲ್ಪಅಭಿಯಾನ – ದಾವಣಗೆರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ

ಸುದ್ದಿ360 ದಾವಣಗೆರೆ ಜ. 18: ಭಾರತೀಯ ಜನತಾ ಪಾರ್ಟಿ ಇದೇ ಜ. 21ರಿಂದ 29ರವರೆಗೆ ರಾಜ್ಯಾದ್ಯಂತ ಬೂತ್ ವಿಜಯ ಸಂಕಲ್ಪ ಅಭಿಯಾನ ಆಯೋಜಿಸಲಾಗಿದ್ದು, ಬೆಳಿಗ್ಗೆ 11. 30ಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಸಂಸದ ಜಿ. ಎಂ. ಸಿದ್ದೇಶ್ವರ, ಶಾಸಕ ಎಸ್. ಎ. ರವೀಂದ್ರನಾಥ್, ಪರಿಷತ್ ಸದಸ್ಯ ನವೀನ್,  ಜೇಷ್ಠಾ ಪಡಿಯಾಳ್, ಜಿಲ್ಲೆಯ ಪ್ರತಿನಿಧಿಗಳು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಇದೊಂದು ಸರ್ವಸ್ಪರ್ಶಿ ಕಾರ್ಯಕ್ರಮವಾಗಿದ್ದು, ಬಿಜೆಪಿಯನ್ನು ಗೆಲುವಿನ ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 2 ಕೋಟಿ ಮತದಾರರನ್ನು ಈ ವಿಜಯ ಸಂಕಲ್ಪ ಅಭಿಯಾನದ ಮೂಲಕ ನಮ್ಮ ಕಾರ್ಯಕರ್ತರು ತಲುಪಲಿದ್ದಾರೆ. 10 ವಿಭಾಗಗಳಲ್ಲಿ 39 ಸಂಘಟನಾತ್ಮಕ ಜಿಲ್ಲೆಗಳು, 312 ಮಂಡಲಗಳಲ್ಲಿ ಬಿಜೆಪಿಯ ಸಾಧನೆಯನ್ನು ಮನೆ ಮನೆಗೆ ತಲುಪಸಲಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆಗಳ ಕುರಿತು ಕರಪತ್ರ ಹಂಚಿಕೆ ಮಾಡಲಾಗುವುದು. 2 ಕೋಟಿಗಿಂತ ಹೆಚ್ಚು ಮತದಾರರ ಸಂಪರ್ಕ ಮಾಡಿ ಅವರ ಮನೆ ಮನೆಗೆ ತೆರಳಿ ಕರಪತ್ರ ನೀಡಲಾಗುವುದು ಎಂದರು.

ಇದೇ ವೇಳೆ ಕಾಂಗ್ರೆಸ್ಸಿಗರ ಮೇಲೆ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ನವರು ಗಾಂಧಿ ಹೆಸರು ಹೇಳಿಕೊಳ್ಳುತ್ತಾ ನಕಲಿ ಗಾಂಧಿಗಳು ಎಂಬುದು ಜನರಿಗೆ ಗೊತ್ತಾಗಿದೆ. ಗಾಂಧಿ ಹೆಸರು ತೆಗೆದರೆ ಪ್ರಿಯಾಂಕಾ ಯಾರು ಎಂದು ಜನರು ಕೇಳುವ ಪರಿಸ್ಥಿತಿ ಇದೆ. ಪಾಕಿಸ್ತಾನಕ್ಕೆ ಬುದ್ದಿ ಬಂದರೂ ಕಾಂಗ್ರೆಸ್ ನವರಿಗೆ ಇನ್ನು ಬಂದಿಲ್ಲ. ಸುಳ್ಳು ಹಾಗೂ ಅಸಾಧ್ಯದ ಭರವಸೆ ನೀಡುತ್ತಿರುವ ಕಾಂಗ್ರೆಸ್, 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇವೆ. ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ನೀಡುತ್ತೇವೆ ಎಂಬ ಭರವಸೆ ನೀಡುತ್ತಿದ್ದಾರೆ.  ಈಗ ಅಧಿಕಾರದಲ್ಲಿರುವ ಮೂರು ರಾಜ್ಯಗಳಲ್ಲಿ ಯಾಕೆ ಇಂತಹ ಸೌಲಭ್ಯಗಳನ್ನು ಘೋಷಣೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಈಗಾಗಲೇ ವ್ಯವಸ್ಥಿತವಾಗಿ ಪೂರ್ವಭಾವಿ ಸಿದ್ಧತೆ ನಡೆದಿದೆ. ಜಿಲ್ಲಾ ಮತ್ತು ಮಂಡಲಗಳಲ್ಲಿ ಸಭೆ ನಡೆಸಿ, ಬಿಜೆಪಿಯು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆಯುವ ಗುರಿ ಹಾಕಿಕೊಂಡಿದೆ.

ತಳಹಂತದಿಂದ ಪಕ್ಷದ ಸದೃಢಗೊಳಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಕಾರ್ಯಕರ್ತರು, ಅಭಿಮಾನಿಗಳು ತಮ್ಮ ಮನೆ, ದ್ವಿಚಕ್ರ ವಾಹನ ಹಾಗೂ ಕಾರುಗಳಿಗೆ ಅಂಟಿಸಲು ಮೂರು ನಮೂನೆಯ ಸ್ಟಿಕ್ಕರ್ ಗಳನ್ನು ವಿತರಿಸಲಾಗುವುದು. ಸರ್ಕಾರದ ಸಾಧನೆ ಬಿಂಬಿಸಲು ಹಾಗೂ ಜನ ಕಲ್ಯಾಣದೆಡೆಗೆ ಬಿಜೆಪಿಯ ಬದ್ಧತೆ ಸಾರಲು ಪ್ರತಿ ಬೂತ್ ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆ ಸಾರುವ ಮತ್ತು ಯೋಜನೆಗಳ ಮಾಹಿತಿ ನೀಡುವ ಡಿಜಿಟಲ್ ಪೈಂಟಿಂಗ್ ಸೇರಿದಂತೆ ಗೋಡೆ ಬರಹಗಳನ್ನು ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ದಾವಣಗೆರೆಯಲ್ಲಿ ಐವರ ತಂಡ ರಚಿಸಲಾಗಿದೆ. ಮಹಾನಗರ ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ನೇತೃತ್ವದ ತಂಡದಲ್ಲಿ ಕೆ. ವಿ. ನಾಗರಾಜ್, ರಮೇಶ್, ರಾಜು ಹಾಗೂ ಶಿವಾನಂದ ಅವರಿದ್ದು, ಎಲ್ಲಾ ಮಂಡಲದಲ್ಲಿಯೂ ತಂಡಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

ಸದಸ್ಯತ್ವ ಅಭಿಯಾನ ಸಂಪೂರ್ಣ  ಆನ್ ಲೈನ್ ಇರಲಿದ್ದು, ಒಂದು ಮಿಸ್ಡ್ ಕಾಲ್ ಮೂಲಕ ನೋಂದಣಿ ಮಾಡಲಾಗುತ್ತದೆ ಮತ್ತು ಸದಸ್ಯರ ಸಂಖ್ಯೆಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.

ಈ ತಿಂಗಳ ಜ.29ರ ಮನ್ ಕೀ ಬಾತ್ ಕಾರ್ಯಕ್ರಮ ಕರ್ನಾಟಕದ ಪಾಲಿಗೆ ವಿಶೇಷವಾಗಿರಲಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರು ಒಟ್ಟಿಗೆ ಕೂತು ಪ್ರಧಾನಿಯವರ ಮಾತುಗಳನ್ನು ಆಲಿಸಲಿದ್ದಾರೆ. ಶೇ.90ರಷ್ಟು ಬೂತ್‍ಗಳು ಈ ಕಾರ್ಯಕ್ರಮವನ್ನು ಆಲಿಸಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಅಭಿಯಾನದ ಜಿಲ್ಲಾ ಪ್ರಭಾರಿ ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಜಿ. ಪ್ರಸನ್ನಕುಮಾರ್, ಜಿಲ್ಲಾ ಮಾಧ್ಯಮ ವಕ್ತಾರ ಡಿ.ಎಸ್. ಶಿವಶಂಕರ್, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ನರೇಶ್ ಹೊರಟ್ಟಿ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!