ದಾವಣಗೆರೆ: ಸರ್ಕಾರಿ ಶಾಲೆಗೆ ಹೆಚ್ಚಿನ ಮಕ್ಕಳು ಬರುವಂತಾಗಬೇಕು. ಸೌಲಭ್ಯ ಇಲ್ಲದ ಶಾಲೆಗಳ ಅಭಿವೃದ್ಧಿ ಆಗಬೇಕು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಹೇಳಿದರು.
ಪಾಲಿಕೆಯ 9ನೇ ವಾರ್ಡ್ ನ ಗುಲೀಸ್ಥನೆ ಮುಸ್ತಫಾ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಲೆಯ ದುರವಸ್ಥೆ ನೋಡಿ ಬೇಸರ ವ್ಯಕ್ತಪಡಿಸಿದ ಅವರು, ಶಾಲೆಯ ಮುಖ್ಯಸ್ಥರಿಗ ಕೈಲಾದಷ್ಟು ಸಹಾಯ ಮಾಡಿ ಮಕ್ಕಳಿಗೆ ಬಹುಮಾನ ವಿತರಿಸಿದರು.
ಕಾಮಗಾರಿ ಪರಿಶೀಲನೆ:
ಇನ್ನು ಈ ವಾರ್ಡ್ ನಲ್ಲಿ ಕೈಗೊಂಡಿರುವ ಕಾಮಗಾರಿಗಳ ಕುರಿತಂತೆ ಗಡಿಗುಡಾಳ್ ಮಂಜುನಾಥ್ ಅವರು ಪರಿಶೀಲಿಸಿದರು. ಶಾಲೆ ಸಮೀಪದಲ್ಲಿ ಇದ್ದಂತ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವುದು ಗಮನಕ್ಕೆ ಬಂತು. ಶಾಲಾ ಮಕ್ಕಳು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕ ಇದೆ ಎಂದು ಸ್ಥಳೀಯರು ತಿಳಿಸಿದರು.
ಜೆಟ್ ಯಂತ್ರ ತಡವಾಗಿ ಬರುತ್ತಿರುವುದರಿಂದ ತ್ಯಾಜ್ಯ ನೀರು ಹರಿಯುತ್ತಲೇ ಇರುತ್ತದೆ. ಹಾಗಾಗಿ ಸಂಬಂಧಪಟ್ಟ ಇಲಾಖೆ ಹಾಗೂ ಮೇಯರ್ ಅವರು ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಮಕ್ಕಳ ಹಿತದೃಷ್ಟಿಯಿಂದ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಗಡಿಗುಡಾಳ್ ಮಂಜುನಾಥ್ ಆಗ್ರಹಿಸಿದರು.
ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಕೂಲಿ ಕಾರ್ಮಿಕರು, ಬಡವರು, ಹಿಂದುಳಿದ ವರ್ಗಗಳ ಜನರ ಮಕ್ಕಳೇ ಹೆಚ್ಚಾಗಿ ಸರ್ಕಾರಿ ಶಾಲೆಗಳಿಗೆ ಬರುವುದು. ಇನ್ನೂ ಹೆಚ್ಚಿನ ಸೌಕರ್ಯಗಳನ್ನು ನೀಡಿದರೆ ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಇಲ್ಲಿ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಹಾನಗರ ಪಾಲಿಕೆ ಸದಸ್ಯ ಕೆ. ಜಾಕಿರ್ ಅಲಿ ಮಾತನಾಡಿ, ಶಾಲೆಯ ಕುಂದು ಕೊರತೆಯ ಬಗ್ಗೆ ಮಾತನಾಡಿ ಶೀಘ್ರದಲ್ಲಿ ಈ ಶಾಲೆಯ ನವೀಕರಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಫೀಕ್ ಪಂಡಿತ್, 9ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಾದಾಪೀರ್ ಮೊಟ್ಟೆ, ಕೊಟ್ಟೂರು ಇಮ್ರಾನ್, ಹಾಗೂ ಗಿಡ್ಡು ಮತ್ತಿತರರು ಉಪಸ್ಥಿತರಿದ್ದರು.