ಭ್ರಷ್ಟಾಚಾರಕ್ಕೆ ರಹದಾರಿ ಮಾಡಿಕೊಂಡವರು ಕಾಂಗ್ರೆಸ್ನವರು: ಸಿಎಂ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಫೆ. 15: ನಿಗಮದಲ್ಲಿ ಟೆಂಡರ್ ನೀಡುವಿಕೆಯಲ್ಲಿ ಎರಡು ಹಂತದ  ಪರಿಶೀಲನೆಯನ್ನು ತೆಗೆದು ಹಾಕಿ ಭ್ರಷ್ಟಾಚಾರಕ್ಕೆ ರಹದಾರಿ ಮಾಡಿಕೊಂಡಿದ್ದವರು ಕಾಂಗ್ರೆಸ್ನವರು. ಡಿ.ಕೆ.ಶಿವಕುಮಾರ್ ಅವರು ನೀರಾವರಿ ಸಚಿವರಿದ್ದಾಗ ಟೆಂಡರ್ ಪರಿಶೀಲನಾ ಸಮಿತಿಯನ್ನು ತೆಗೆದುಹಾಕಿದ್ದರು. ಟಿ. ಎ. ಸಿ ಯನ್ನೂ ತೆಗೆದುಹಾಕಿದ್ದರು. ನಾವು ಬಂದ ನಂತರ ಅದನ್ನು ಪುನ: ಸ್ಥಾಪನೆ ಮಾಡಿದ್ದೇವೆ. ಹೀಗಾಗಿ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು  ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ  ಇಂದು ಹೋಟೆಲ್ ಕ್ಯಾಪಿಟಲ್ ನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಸುಲಿಗೆ ಮಾಡುವುದೇ ಕಾಂಗ್ರೆಸ್ ಅಜೆಂಡಾ

ಕಾಂಗ್ರೆಸ್ ಅವರು ಹಿಂದೆ ಮಾಡಿರುವ ಕರ್ಮಕಾಂಡವನ್ನು ನೆನಪು ಮಾಡಿಕೊಂಡು ಮಾತನಾಡುತ್ತಿದ್ದಾರೆ. ಗುತ್ತಿಗೆದಾರರು ಟೆಂಡರ್ ಸಲ್ಲಿಸಬೇಡಿ, ಮುಂದೆ ಅಧಿಕಾರಕ್ಕೆ ಬಂದು ತನಿಖೆ ಮಾಡಿಸುತ್ತೇವೆ ಎಂದು ಗುತ್ತಿಗೆದಾರರಿಗೆ ಧಮಕಿ ಹಾಕುತ್ತಿದ್ದಾರೆ. ಇದರ ಅರ್ಥ ಏನೆಂದರೆ ಅಧಿಕಾರಕ್ಕೆ ಬಂದರೆ ಸುಲಿಗೆ ಮಾಡಲು ಬರುತ್ತಿದ್ದಾರೆ ಎನ್ನುವುದು ಬಹಳ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್ ತನ್ನ ಕಾಲದ  ಹಗರಣಗಳ ಬಗ್ಗೆ ಮೊದಲು ಉತ್ತರ ನೀಡಲಿ

ಕಾಂಗ್ರೆಸ್ ನವರ ಹಿಂದಿನ ಹಗರಣಗಳ  ಬಗ್ಗೆ  ಲೋಕಾಯುಕ್ತ ತನಿಖೆ ನಡೆಯುತ್ತಿದೆ.  ಅವರ ಮೇಲಿರುವ ಆರೋಪಗಳಿಗೆ ಉತ್ತರ ಕೊಡಲಿ. ಅವರ ಕಾಲದಲ್ಲಿ ಆಗಿರುವ ಟೆಂಡರ್ ಹಗರಣಗಳ ಬಗ್ಗೆ ಮೊದಲು ಉತ್ತರ ಕೊಡಲಿ. ಅವರ ಅಜೆಂಡಾ ಅವರೇ  ಹೇಳಿಕೊಂಡಿದ್ದಾರೆ. ಶೇ 40 % ಕಮಿಷನ್ ಆರೋಪ ಯಾವುದೂ ನಿರೂಪಿತವಾಗಿಲ್ಲ. ನ್ಯಾಯಾಲಯದಲ್ಲಿ ಕೊಡುವುದಾಗಿ ಹೇಳಿದ್ದವರು ಇನ್ನೂ ಕೊಟ್ಟಿಲ್ಲ. ಅವರು ಎಲ್ಲಿ ಬೇಕಾದರೂ ನಿರ್ದಿಷ್ಟ ಪ್ರಕರಣ ದಾಖಲು ಮಾಡಿದರೆ ತನಿಖೆಯಾಗುತ್ತದೆ. ಅದನ್ನು ಮಾಡುವುದು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದರೆ ಏನೂ ಪ್ರಯೋಜನವಿಲ್ಲ ಎಂದರು.

ಪಾರದರ್ಶಕ ವ್ಯವಸ್ಥೆ

ಗುಳಿಹಟ್ಟಿ ಶೇಖರ್ ಅವರು ಸಾಮಾನ್ಯವಾಗಿ ಪತ್ರ ಬರೆದಿದ್ದಾರೆ. ನಾವು ಅವರಿಗೆ ಪತ್ರ ಮುಖೇನ ನಿರ್ದಿಷ್ಟ ಪ್ರಕರಣವಿದ್ದರೆ ನೀಡಲಿ, ತನಿಖೆ ಮಾಡುತ್ತೇವೆ ಎಂದು ಕೇಳುತ್ತಿದ್ದೇವೆ. ನಿನ್ನೆ ಸದನದಲ್ಲಿಯೂ ಸ್ಪಷ್ಟವಾಗಿ ಕೇಳಿದ್ದೇವೆ. ಯಾವುದಾದರೂ ಅಧಿಕಾರಿ ಯಾವುದೇ ಹಂತದಲ್ಲಿ ಭ್ರಷ್ಟಾಚಾರ ಮಾಡಿದ್ದರೆ ತನಿಖೆ ಮಾಡುತ್ತೇವೆ ಎನ್ನುವುದು ನಮ್ಮ ನಿಲುವಾಗಿದೆ. ಇದ್ಯಾವುದೂ ನೀಡದೆ, ಕೇವಲ  ಹೇಳಿಕೆ ನೀಡಿದರೆ ಆಗುವುದಿಲ್ಲ.  ಕಾಂಗ್ರೆಸ್ 5 ವರ್ಷ ಆಡಳಿತ ಮಾಡಿದೆ. ಅವರೂ ಟೆಂಡರ್ ಕರೆದಿದ್ದಾರೆ. ನಾವು ಬಂದ ನಂತರ ಟೆಂಡರ್ ಪರಿಶೀಲನಾ ಸಮಿತಿಯನ್ನು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನೇಮಕ ಮಾಡಿದ್ದೇವೆ. ಟೆಂಡರ್ ಪರಿಶೀಲನೆಯಾಗುತ್ತದೆ ಹಾಗೂ ಇಡೀ ಪ್ರಕ್ರಿಯೆ ಪಾರದರ್ಶಕವಾಗಿದೆ. ಯಾರು ಬೇಕಾದರೂ  ದೂರು ನೀಡಬಹುದಾಗಿದೆ ಎಂದರು.

admin

admin

Leave a Reply

Your email address will not be published. Required fields are marked *

error: Content is protected !!