ಸುದ್ದಿ360 ದಾವಣಗೆರೆ, ಫೆ.26: ನಗರದ ಕುಂದುವಾಡ ಕೆರೆ ಹಾಗೂ ಟಿ. ಬಿ. ಸ್ಟೇಷನ್ ನಿಂದ ನೀರು ಪೂರೈಕೆ ಮಾಡಲಾಗುತ್ತಿದ್ದರೂ ಮೋಟಾರ್ ಹಾಳಾಗಿರುವ ಕಾರಣ ಕೆಲವೆಡೆ ಹತ್ತು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕುಂದುವಾಡ ಕೆರೆಯಿಂದ ನಗರಕ್ಕೆ ನೀರು ಸರಬರಾಜು ಮಾಡಲು ಬಳಕೆಯಾಗುವ ಎರಡು ಮೋಟಾರ್ ಗಳು ಹಾಳಾಗಿವೆ. ಇನ್ನು ಒಂದು ಹಾಳಾದರೆ ಮತ್ತೊಂದು ಉಪಯೋಗಕ್ಕೆ ಇಟ್ಟುಕೊಂಡಿದ್ದ ಮೋಟಾರ್ ಸಹ ಕೆಟ್ಟು ಹೋಗಿರುವುದರಿಂದ ಹಳೆ ದಾವಣಗೆರೆ ಹಾಗೂ ಹೊಸ ದಾವಣಗೆರೆಯ ಕೆಲವು ಪ್ರದೇಶಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗಿದೆ. ಜಲಸಿರಿ ಯೋಜನೆಯಡಿ ಕಾಮಗಾರಿ ನಡೆಸುವ ವೇಳೆ ಮೋಟಾರ್ ಗೆ ಧಕ್ಕೆಯಾಗಿರುವ ಕಾರಣ ಈ ಸಮಸ್ಯೆ ತಲೆದೋರಿದೆ.
ಕಳೆದ ಬಾರಿ ಉತ್ತಮ ಮಳೆಯಾಗಿದೆ. ನೀರು ಸಂಗ್ರಹವಾಗಿದೆ. ಆದ್ರೆ, ಕೆಲವೊಂದು ಪ್ರದೇಶಗಳಲ್ಲಿ ನಾಲ್ಕೈದು ದಿನಕ್ಕೊಮ್ಮೆ, ಕೆಲವೆಡೆ ಹತ್ತು ದಿನಕ್ಕೊಮ್ಮೆ ಕುಡಿಯುವ ನೀರು ಹರಿಸಲಾಗುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣಕ್ಕೆ ಈ ಸಮಸ್ಯೆಯಾಗಿದೆ. ಬೇಸಿಗೆ ಕಾಲ ಬರುತ್ತಿದೆ. ಮೊದಲೇ ಈ ರೀತಿಯ ಸಮಸ್ಯೆಯಾದರೆ ಬೇಸಿಗೆ ವೇಳೆ ಜನರು ನೀರಿಗಾಗಿ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿ ವರ್ಗದವರು ಈ ಬಗ್ಗೆ ಹೆಚ್ಚು ಗಮನ ಹರಿಸಿ ಸಮಸ್ಯೆ ಕೂಡಲೇ ಪರಿಹರಿಸಬೇಕು ಎಂದು ಮಂಜುನಾಥ್ ಆಗ್ರಹಿಸಿದರು.
ಕುಂದುವಾಡ ಕೆರೆಯಿಂದ ನೀರು ಪೂರೈಕೆ ಮಾಡಲು ತೊಂದರೆ ಆಗಿರುವ ಕಾರಣ ರಾಜನಹಳ್ಳಿ ಪಂಪ್ ಹೌಸ್ ನಿಂದ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ಹಳೆ ದಾವಣಗೆರೆಯಲ್ಲಿ ಏಳೆಂಟು ದಿನಕ್ಕೊಮ್ಮೆ ಕೆಲವೆಡೆ ನೀರು ಸರಬರಾಜು ಮಾಡಲಾಗುತ್ತಿತ್ತು. ಹೊಸ ದಾವಣಗೆರೆಯ ಕೆಲವೆಡೆ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಹರಿಸಲಾಗುತಿತ್ತು. ಸಮಸ್ಯೆಯಾಗಿರುವ ಕಾರಣ ಎರಡರಿಂದ ಮೂರು ದಿನ ತಡವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದು ಪಾಲಿಕೆಯ ಎಕ್ಸಿಕ್ಯೂಟೀವ್ ಎಂಜಿನಿಯರ್ ಉದಯಕುಮಾರ್ ಮಾಹಿತಿ ನೀಡಿದರು.
ಜಲಸಿರಿ ಯೋಜನೆಯಡಿ ನಡೆಸುತ್ತಿರುವ ಕಾಮಗಾರಿಯಿಂದ ತೊಂದರೆಯಾಗಿದೆ. ಈ ಯೋಜನೆ ನಿರ್ವಹಣೆ ಮಾಡುತ್ತಿರುವವರು ಸರಿಪಡಿಸಬೇಕಿದೆ. ಆದಷ್ಟು ಬೇಗ ಮೋಟಾರ್ ಸರಿಪಡಿಸಲಾಗುವುದು. ಆಗ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗದು. ಬಾತಿ ಬಳಿ ನೀರಿನ ಪೈಪ್ ಒಡೆದಿತ್ತು. ಅದೇ ರೀತಿಯಲ್ಲಿ ಬೆಸ್ಕಾಂ ಕಾಮಗಾರಿಗಳು ಎರಡು ದಿನಗಳ ಕಾಲ ನಡೆಯಿತು. ಜಲಸಿರಿ ಯೋಜನೆಯಡಿ ಕೈಗೊಳ್ಳಲಾದ ಕೆಲಸದ ವೇಳೆ ಮೋಟಾರ್ ಹಾಳಾಗಿತ್ತು. ಈ ಮೂರು ಕಾರಣಗಳಿಂದ ಈ ಸಮಸ್ಯೆ ತಲೆದೋರಿದೆ ಎಂದು ಉದಯಕುಮಾರ್ ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಮಂಜುನಾಥ್ ಅವರು, ಪ್ರತಿಬಾರಿಯೂ ಒಂದಲ್ಲಾ ಒಂದು ರೀತಿಯ ಸಬೂಬು ಹೇಳುತ್ತಾರೆ. ನಗರಕ್ಕೆ ನೀರು ಸರಬರಾಜು ಮಾಡುವುದು ತುಂಬಾನೇ ಮುಖ್ಯ. ಮೋಟಾರ್ ಹಾಳಾಗಿದೆ ಎಂಬ ಕಾರಣಕ್ಕೆ ಹತ್ತು ದಿನಕ್ಕೊಮ್ಮೆ ನೀರು ಪೂರೈಸಿದರೆ ಜನರು ಬದುಕುವುದಾದರೂ ಹೇಗೆ? ಅಧಿಕಾರಿಗಳು ಇಂಥ ವಿಚಾರ ಬಂದಾಗ ಆದಷ್ಟು ಬೇಗ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು. ಬೇಸಿಗೆ ಬರುತ್ತಿದೆ. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭದ್ರಾ ಡ್ಯಾಂನಿಂದ ನೀರು ಬಿಟ್ಟಾಗ ನೀರು ಸಂಗ್ರಹವಾಗುವ ವೇಳೆಯಲ್ಲಿ ಟಿ. ಬಿ. ಸ್ಟೇಷನದ ಹಾಗೂ ಕುಂದವಾಡ ಕೆರೆ ಹೂಳೆತ್ತುವ ಕಾಮಗಾರಿ ನಡೆಸಲಾಯಿತು. ಅದು ಅವೈಜ್ಞಾನಿಕವಾಗಿ ಮಾಡಲಾಗಿದೆ. ಈಗ ಒಂದು ಗಂಟೆ ಕಡಿಮೆ ನೀರು ಹರಿಸಲಾಗುತ್ತಿದೆ. ಕೇಳಿದರೆ ನೀರು ಸಂಗ್ರಹವಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ದೂರದೃಷ್ಟಿತ್ವದಿಂದ ಕಾಮಗಾರಿ ಸಮರ್ಪಕವಾಗಿ ಮಾಡಿದ್ದರೆ ಈ ತೊಂದರೆ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಭದ್ರಾ ಜಲಾಶಯದಿಂದ ನೀರು ಹರಿಸುವುದು ತಡವಾಗಲಿದೆ. ಹಾಗಿದ್ರೂ ಕ್ರಮ ಕೈಗೊಂಡಿಲ್ಲ. ಹೂಳೆತ್ತಲು ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ಆದರೂ ನೀರಿನ ಸಮಸ್ಯೆ ಬಗೆಹರಿಸಲು ಆಗಿಲ್ಲ. ಬಿಜೆಪಿ ನೇತೃತ್ವದ ಆಡಳಿತ ವರ್ಗ ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ. ಇಚ್ಛಾಶಕ್ತಿಯೂ ಇಲ್ಲ. ಮೋಟಾರ್ ಗಳು ಹಾಳಾಗಿದ್ದರೂ ಆಸಕ್ತಿ ವಹಿಸಿ ಸರಿಪಡಿಸುವ ಕೆಲಸ ಮಾಡಿಲ್ಲ. ನಿತ್ಯವೂ ಜನರು ಪಾಲಿಕೆಗೆ ಹಿಡಿಶಾಪ ಹಾಕುವಂತಾಗಿದೆ. ಕೆಲವೆಡೆಯಂತೂ ಹದಿನೈದು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಸಮುದ್ರಕ್ಕೆ ನೆಂಟಸ್ಥನ ಉಪ್ಪಿಗೆ ಬರ ಎಂಬಂತ ಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜನಹಳ್ಳಿಯಿಂದ ನೀರು ಪೂರೈಸಲಾಗುವುದು ಎನ್ನುತ್ತಾರೆ. ಕುಂದುವಾಡ ಕೆರೆ ಹೂಳೆತ್ತಿದರೂ ಪ್ರಯೋಜನ ಆಗಿಲ್ಲ. ಮೋಟಾರುಗಳು ಹಾಳಾಗಿದ್ದರೂ ಕ್ರಮ ಏಕೆ ತೆಗೆದುಕೊಂಡಿಲ್ಲ. ಏನು ಮಾಡಿದರೂ ನಡೆಯುತ್ತೆ ಎಂಬ ಧಾಟಿಯಲ್ಲಿ ಆಡಳಿತ ವರ್ಗ ವರ್ತಿಸುತ್ತಿರುವುದು ಸರಿಯಲ್ಲ ಎಂದು ಮಂಜುನಾಥ್ ಕಿಡಿಕಾರಿದ್ದಾರೆ.
ಭೇಟಿ ವೇಳೆ ಮಹಾನಗರ ಪಾಲಿಕೆಯ ಹಿರಿಯ ಸದಸ್ಯರಾದ ಕೆ. ಚಮನ್ ಸಾಬ್, ಪಾಮೇನಹಳ್ಳಿ ನಾಗರಾಜ್, ಮನು, ನಿಖಿಲ್ ಸೇರಿದಂತೆ ಇತರರು ಹಾಜರಿದ್ದರು.