ಅರವಿಂದ ಕೇಜ್ರಿವಾಲ್ , ಭಗವಂತ್ ಸಿಂಗ್ ಮಾನ್ ರಿಂದ ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ

ಸುದ್ದಿ360 ದಾವಣಗೆರೆ ಮಾ.2: ಆಮ್ ಆದ್ಮಿ ಪಕ್ಷದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ, ಹೊಸದಿಲ್ಲಿ ಮುಖ್ಯಮಂತ್ರಿಯೂ ಆದ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಇವರು ಮದ್ಯ ಕರ್ನಾಟಕ ದಾವಣಗೆರೆಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದ ಮೂಲಕ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ ತಿಳಿಸಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಾ.4ರಂದು ನಗರದ ಸರಕಾರಿ ಹೈಸ್ಕೂಲ್ ಮೈದಾನದಲ್ಲಿ ಮಾ.4ರಂದು ಮಧ್ಯಾಹ್ನ 12 ಗಂಟೆಗೆ ಆಮ್ ಆದ್ಮಿ ಪಕ್ಷದ ರಾಜ್ಯ ಮಟ್ಟದ ಸಮಾವೇಶವನ್ನು ರಾಷ್ಟ್ರೀಯ ಮುಖಂಡರುಗಳು ಉದ್ಘಾಟಿಸಲಿದ್ದಾರೆ. ಸಮಾವೇಶಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಅದ್ಭುತ ಸ್ಪಂದನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವೇದಿಕೆಯನ್ನು ಇನ್ನಷ್ಟು ವಿಸ್ತಾರಗೊಳಿಸಲಾಗುತ್ತಿದೆ. ಈ ಮೊದಲು ಸಮಾವೇಶಕ್ಕೆ 15-20 ಸಾವಿರ ಜನ ಸೇರುವ ನಿರೀಕ್ಷೆಯಿತ್ತು. ಜನಸ್ಪಂದನೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಸುಮಾರು 50 ಸಾವಿರ ಮಂದಿ ಸೇರುವ ಸಾಧ್ಯತೆ ಇರುವುದಾಗಿ ತಿಳಿಸಿದರು.
ಆಪ್ ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ ಮಾತನಾಡಿ, ದಾವಣಗೆರೆ ರಾಜ್ಯ ರಾಜಕೀಯ ಶಕ್ತಿ ಕೇಂದ್ರವಾಗಿದೆ. ಇಲ್ಲಿಂದ ಪಕ್ಷದ ಕೆಲಸ ಆರಂಭಿಸಿದರೆ ಯಶಸ್ಸು ಶತಸಿದ್ಧ. ಹೀಗಾಗಿ ರಾಜ್ಯದ ಚುನಾವಣಾ ಪ್ರಚಾರವನ್ನು ಮದ್ಯಕರ್ನಾಟಕ ದಾವಣಗೆರೆ ನಗರದಿಂದಲೇ ಆರಂಭಿಸುವಂತೆ ರಾಜ್ಯ ನಾಯಕರಲ್ಲಿ ಮನವಿ ಮಾಡಲಾಗಿತ್ತು. ಇದರ ಪರಿಣಾಮವಾಗಿ ನಗರದಲ್ಲಿ ಸಮಾವೇಶಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜಾಗುತ್ತಿದ್ದು, ವೇದಿಕೆ ಎದುರು ಸುಮಾರು 150 ಚದುರ ಅಡಿ ವಿಸ್ತೀರ್ಣದ ಪೆಂಡಾಲ್ ಅಳವಡಿಸಲಾಗಿದೆ. 10,000ಕ್ಕೂ ಅಧಿಕ ಆಸನ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಮಾವೇಶದಲ್ಲಿ ಭಾಗವಹಿಸುವ 50 ಸಾವಿರ ಜನರಿಗೂ ಮಧ್ಯಾಹ್ನ ಉಪಹಾರ ವ್ಯವಸ್ಥೆ ಮಾಡಲಾಗಿದೆ. ದಿಲ್ಲಿ, ಪಂಜಾಬ್ ಸಿಎಂಗಳ ಜತೆ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಇತರೆ ರಾಜ್ಯ, ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ.
ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳ ಚುನಾವಣಾ ಉಸ್ತುವಾರಿ ಡಾ.ವಿಶ್ವನಾಥ್ ಮಾತನಾಡಿ, ರಾಜ್ಯದಲ್ಲಿ ಪಕ್ಷದ ಪದಾಧಿಕಾರಿಗಳ ಸಂಖ್ಯೆಯೇ 15 ಸಾವಿರಕ್ಕೂ ಹೆಚ್ಚಿದೆ. ಹೀಗಾಗಿ ಅತಿ ಹೆಚ್ಚು ಜನ ಸೇರುವ ವಿಶ್ವಾಸವಿದೆ. ಸಮಾರಂಭದಲ್ಲಿ ರಾಜ್ಯದ ಎಲ್ಲ ಪದಾಧಿಕಾರಿಗಳಿಗೆ ಸಿಎಂ ಅರವಿಂದ ಕೇಜ್ರೀವಾಲ್ ಪ್ರಮಾಣವಚನ ಬೋಧಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮೀಕಾಂತ್, ರುದ್ರಯ್ಯ ನವಲಿ ಹಿರೇಮಠ್, ಟಿಕೆಟ್ ಆಕಾಂಕ್ಷಿಗಳಾದ ಇಂದೂಧರ್ ಕೂಲಂಬಿ, ಗೋವಿಂದರಾಜ್ ಜಗಳೂರು, ಡಾ.ಕೆಂಚಿಕೆರೆ ಜಯ್ಯಣ್ಣ, ಬಿ.ರಾಜಶೇಖರ್, ಶ್ರೀಧರ ಪಾಟೀಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆದಿಲ್ ಖಾನ್ ಇತರರಿದ್ದರು.