ಬಿಜೆಪಿಯವರು ‘ಹಗರಣ ವಿಜಯ ಸಂಕಲ್ಪ ಯಾತ್ರೆ’ ಮಾಡುವುದು ಸೂಕ್ತ: ಕೆಆರ್ ಎಸ್ ಪಕ್ಷ ಆಕ್ರೋಶ
ಸುದ್ದಿ360 ದಾವಣಗೆರೆ ಮಾ.5: ರಾಜ್ಯ ಸರ್ಕಾರದ 40 ಪರ್ಸೆಂಟ್ ಕಮೀಷನ್ ಭ್ರಷ್ಟಾಚಾರ ಇದೀಗ ಮಾಡಾಳು ವಿರೂಪಾಕ್ಷಪ್ಪ ಮತ್ತು ಅವರ ಮಗ ಪ್ರಶಾಂತ್ ಮೂಲಕ ಬಟಾಬಯಲಾಗಿದೆ. ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರೂ ಸಹ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸುವುದಾಗಿ ಕೆಆರ್ ಎಸ್ ದಾವಣಗೆರೆ ಜಿಲ್ಲಾಕಾರ್ಯದರ್ಶಿ ಮಲ್ಲಪ್ಪ ಕೆ ತಿಳಿಸಿದರು.
ನಗರದಲ್ಲಿ ಈ ಕುರಿತು ಕೆಆರ್ ಎಸ್ ಪಕ್ಷ ಜಿಲ್ಲಾ ಘಟಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಮುಖ್ಯಮಂತ್ರಿಗಳು ಪ್ರತಿಬಾರಿ ಭ್ರಷ್ಟಾಚಾರ ಆರೋಪವನ್ನು ಪ್ರಶ್ನಿಸಿದಾಗ ದಾಖಲೆ ನೀಡಿ ಎಂದು ಕೇಳುತ್ತಿದ್ದರು. ಇದೀಗ ಸ್ವಪಕ್ಷೀಯ ಶಾಸಕರೇ ಆದ ಮಾಡಾಳು ವಿರೂಪಾಕ್ಷಪ್ಪನವರು ಇಂತಹದೊಂದು ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಇಡಿ ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ಕೆಆರ್ ಎಸ್ ಪಕ್ಷ ಆಗ್ರಹಿಸುತ್ತುದೆ ಎಂದರು.
ಕೆಆರ್ ಎಸ್ ಕಾನೂನು ಘಟಕದ ಜಿಲ್ಲಾಧ್ಯಕ್ಷ ವಕೀಲರಾದ ಸೋಮಶೇಖರ್ ಮಾತನಾಡಿ, ಬಿಜೆಪಿಯದು ವಿಜಯ ಸಂಕಲ್ಪ ಯಾತ್ರೆಯಲ್ಲ ಬದಲಿಗೆ ಅವರು ಅದನ್ನು ಹಗರಣ ವಿಜಯ ಸಂಕಲ್ಪ ಯಾತ್ರೆ ಎಂದು ಬದಲಿಸಿಕೊಳ್ಳುವುದು ಸರಿಯೆನಿಸುತ್ತದೆ ಎಂದು ರಾಜ್ಯ ಸರ್ಕಾರವನ್ನು ಕುಟುಕಿದರು.
ಕೆಎಸ್ ಡಿ ಎಲ್ ಗೆ ಅಧ್ಯಕ್ಷರಾಗಿರುವ ಮಾಡಾಳು ವಿರೂಪಾಕ್ಷಪ್ಪನವರು ಖರೀದಿಯೊಂದಕ್ಕೆ ಸಂಬಂಧಿಸಿದಂತೆ ಅವರ ಮಗ ಪ್ರಶಾಂತ್ ತಂದೆಯ ಪರವಾಗಿ ಮಧ್ಯವರತ್ಇಯಾಗಿ ಗುತ್ತಿಗೆದಾರರಿಂದ 1.20 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಲ್ಲಿ 81 ಲಕ್ಷಕ್ಕೆ ಡೀಲ್ ಕುದುರಿಸಿಕೊಂಡು ಮೊದಲನೇ ಕಂತಾಗಿ 40 ಲಕ್ಷ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಖಾಸಗಿ ಕಚೇರಿಯಲ್ಲಿ 2.02 ಕೋಟಿ ಹಣ ಪತ್ತೆಯಾಗಿದೆ. ಮನೆಯಲ್ಲಿ ಶೋಧ ನಡೆಸಿದಾಗ 6.10 ಕೋಟಿ ಹಣ ಮತ್ತು ಚಿನ್ನಾಭರಣ ಪತ್ತೆಯಾಗಿರುವುದು ಲೋಕಾಯುಕ್ತದಿಂದ ಬಯಲಾಗಿದೆ. ಮಾಡಾಳು ವಿರೂಪಕ್ಷಪ್ಪನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಮತ್ತು ಅವರನ್ನು ಈ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರಭದ್ರಪ್ಪ, ಅಲ್ಪಸಂಖ್ಯಾತ ಘಟಕದ ಜಿಲ್ಲಧ್ಯಕ್ಷ ದಾವುಲ್, ದಾವಣಗೆರೆ ತಾಲ್ಲೂಕು ಅಧ್ಯಕ್ಷ ವೀರಭದ್ರಪ್ಪ ಇತರರು ಇದ್ದರು.