ಕವಲುದಾರಿಯ ಸುಳಿವು ನೀಡಿದ್ದ ಸಚಿವ ಸೋಮಣ್ಣ ಕಣ್ಣೀರಿಟ್ಟಿದ್ದು ಯಾಕೆ

ಸುದ್ದಿ360 ಬೆಂಗಳೂರು ಮಾ.14: ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಹೇಳುವ ಮೂಲಕ ಹಲವು ದಿನಗಳಿಂದ ಎದ್ದಿದ್ದ ಊಹಾಪೋಹದ ಮಾತುಗಳಿಗೆ ಸಚಿವ ಸೋಮಣ್ಣ ಉತ್ತರ ನೀಡಿದ್ದಾರೆ.

ಅವರು ಇಂದು ಸುದೀರ್ಘ ಪತ್ರಿಕಾಗೋಷ್ಠಿಯಲ್ಲಿ ತಮ್ಮ ರಾಜಕೀಯ ಜೀವನ ಕುರಿತ ಮಾಹಿತಿಯನ್ನು ಹಂಚಿಕೊಂಡರು. ಪ್ರಧಾನಿ ಮೋದಿ, ಅಮಿತ್ ಶಾ, ಯಡಿಯೂರಪ್ಪ ಮತ್ತು ಕಟೀಲ್ ನನ್ನ ನಾಯಕರು ಎಂದು ಹೇಳಿದ ಅವರು ಬಿಜೆಪಿ ಬಿಟ್ಟು ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಮೂಲಕ  ಹಲವು ದಿನಗಳಿಂದ ಸಚಿವ ಸೋಮಣ್ಣನವರು ಬಿಜೆಪಿ ತೊರೆದು ಬೇರೆ ಪಕ್ಷ ಸೇರ್ತಾರೆ ಎಂಬ ಊಹಾಪೋಹಕ್ಕೆ ತೆರೆ  ಎಳೆದರಲ್ಲದೆ, ನಾನು ಎಲ್ಲಿಯೂ ಬಿಜೆಪಿ ಬಿಡುವುದಾಗಿ ಹೇಳಿಲ್ಲ. ಮಾಧ್ಯಮದವರು ನಮ್ಮ ಬಗ್ಗೆ ಸುದ್ದಿ ಮಾಡಿ ಮಜ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಈ ಮೂಲಕ ಟಿಕೆಟ್ ಕೊಟ್ರೆ ನಿಲ್ನೀನಿ ಇಲ್ಲದಿದ್ರೆ ಇಲ್ಲ, ಕವಲುದಾರಿಗಳು ಇರುತ್ತವೆ ಎಂಬಿತ್ಯಾದಿಯಾಗಿ ಖಡಕ್ ಆಗಿ ಮಾತನಾಡಿದ್ದ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಇಂದಿನ ಸುದ್ದಿಗೋಷ್ಠಿಯಲ್ಲಿ ನನಗೆ ಏನಾದರೂ ಸಮಸ್ಯೆ ಆಗಿದ್ದರೆ ರಾಜೀನಾಮೆ ಕೊಡುತ್ತಿದ್ದೆ. ಆದರೆ ಅಂತಹ ಯಾವುದೇ ಸಮಸ್ಯೆ ಆಗಿಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಇಲ್ಲವಾದರೆ ಪಕ್ಷಕ್ಕೆ ಕೆಲಸ ಮಾಡುತ್ತೇನೆ. ನಾನು ಸ್ವಾಭಿಮಾನ ಮಾರಿ ಜೀವನ ಮಾಡುವವನಲ್ಲ ಅಂತಹ ಸಂದರ್ಭ ಬಂದರೆ ಪುನಃ ಪಿಗ್ಮಿ ಕಲೆಕ್ಟ್ ಮಾಡಿ ಜೀವನ ನಿರ್ವಹಿಸಲು ಸಿದ್ಧ ಎಂದರು.

ಡಿಕೆಶಿ ನಾನು ಒಂದೇ ಊರಿನವರು. ಅವರ ಜತೆಗಿದ್ದ ಫೋಟೊ ಹಳೆಯದು. ಆ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಚರ್ಚೆಗೆ ಗ್ರಾಸವಾಗಿದೆ. ಡಿಕೆಶಿ ಜತೆ ಫ್ಲೈಟ್ನಲ್ಲಿ ಬಂದರೆ ಆಹ್ವಾನ ಕೊಟ್ಟರು ಅಂತ ಅರ್ಥನಾ ಎಂದು ಪ್ರಶ್ನಿಸಿದರು.

ನಾನು ಎಂದೂ ಸುಳ್ಳು ಹೇಳಿ ಜೀವನ ಮಾಡಿಲ್ಲ. ಶಿವಕುಮಾರ್ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ನನಗೆ ಪ್ರೇರಣೆ. ಯಾರ ಮುಲಾಜಿನಲ್ಲೂ ನಾನು ಬದುಕಿಲ್ಲಎಂದು ಕಣ್ಣೀರು ಹಾಕಿದ ಅವರು, ನಾನು ಪಕ್ಷನಿಷ್ಠಯಿಂದ ಕೆಲಸ ಮಾಡುತ್ತೇನೆ. ಯಾವ ಪಕ್ಷದಲ್ಲಿದ್ದರೂ ಆ ಪಕ್ಷವೇ ನನಗೆ ತಾಯಿ. ನನಗೆ ಡಬಲ್ ಸ್ಟ್ಯಾಂಡರ್ಡ್ ಇಲ್ಲ. ಕಳೆದ ಕೆಲ ದಿನಗಳ ಬೆಳವಣಿಗೆ ನೋವು ತಂದಿರುವುದಾಗಿ ಹೇಳಿದರು.

admin

admin

Leave a Reply

Your email address will not be published. Required fields are marked *

error: Content is protected !!