ದಾವಣಗೆರೆ ಉತ್ತರದಲ್ಲಿ ಪ್ರಜಾಧ್ವನಿ ಯಾತ್ರೆ – ಶಾಮನೂರಲ್ಲಿ ಎಸ್ ಎಸ್ ಎಂ ಪರ ಮತಯಾಚನೆ

ಬಿಜೆಪಿಯಂತೆ ಸುಳ್ಳು ಹೇಳಲ್ಲ- ನುಡಿದಂತೆ ನಡೆಯುತ್ತೇವೆ: ಸಿದ್ಧು

ಸುದ್ದಿ360 ದಾವಣಗೆರೆ ಮಾ.14: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ನೇತೃತ್ವದ ಪ್ರಜಾಧ‍್ವನಿ ಯಾತ್ರೆ ಸಂಚರಿಸಿ, ಕಾಂಗ್ರೆಸ್ ಪಕ್ಷ ಹೊರಡಿಸಿರುವ ಗ್ಯಾರಂಟಿ ಕಾರ್ಡ್ಗಳನ್ನು ಮನೆಮನೆಗೆ ವಿತರಿಸಿತು.

ಪ್ರಜಾಧ್ವನಿ ಯಾತ್ರೆಗಾಗಿ ರೂಪಿಸಿರುವ ಬಸ್‌ನಲ್ಲಿ ಶಾಮನೂರಿಗೆ ಬಂದಿಳಿದ ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್, ಹರಿಹರ ಶಾಸಕ ರಾಮಪ್ಪ, ಜಮೀರ್, ಸಲೀಂ ಅಹಮದ್, ಎಂಎಲ್ ಸಿ ಪ್ರಕಾಶ್ ರಾಥೋಡ್, ಮಾಜಿ ಸಭಾಪತಿ ಬಿ.ಕೆ. ಕೋಳಿವಾಡ ಸೇರಿದಂತೆ ಇತರೆ ಮುಖಂಡರ ಜತೆಯಲ್ಲಿ ಆಗಮಿಸಿದ್ದ ಸಿದ್ಧರಾಮಯ್ಯ ಬಸ್ ಮೇಲಿಂದಲೇ ನಿರೀಕ್ಷೆಗೂ ಮೀರಿ ಸೇರಿದ್ದ ಜನರತ್ತ ಕೈ ಬೀಸಿದರು. ಪಟಾಕಿ ಸಿಡಿಸಿ, ಹೂ-ಮಳೆಗರೆದ ಕಾರ್ಯಕರ್ತರು ಯಾತ್ರೆಯನ್ನು ಘೋಷಣೆಗಳನ್ನು ಕೂಗಿ ಬರಮಾಡಿಕೊಂಡರು.

ನಾವು ಬಿಜೆಪಿಯಂತೆ ಸುಳ್ಳು ಹೇಳಲ್ಲ, ಹಿಂದೆಯೂ ನುಡಿದಂತೆ ನಡಿದಿದ್ದೇವೆ, ಈಗಲೂ ನುಡಿದಂತೆ ನಡೆಯುತ್ತೇವೆ. ಅಧಿಕಾರಕ್ಕೆ ಬಂದರೆ ನಾವು ನೀಡಿರುವ ಗ್ಯಾರಂಟಿ  ಯೋಜನೆಗಳನ್ನು ಈಡೇರಿಸುತ್ತೇವೆ.

-ಸಿದ್ಧರಾಮಯ್ಯ, ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ

ಸಿದ್ಧರಾಮಯ್ಯ ಕಾಲ್ನಡಿಗೆಯಲ್ಲಿ ಹಲವಾರು ಮನೆಗಳಿಗೆ ಭೇಟಿ ನೀಡಿ ತಮ್ಮ ಘೋಷಣೆಯ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಯಾಚಿಸಿದರು.

ಶಾಮನೂರು ಆಂಜನೇಯ ದೇವಾಲಯ ಹಾಗೂ ಅದರ ಎದುರೇ ಇರುವ ಈಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಅವರು, ನಂತರ ಗ್ರಾಮದ ಮುಖ್ಯರಸ್ತೆವರೆಗೂ ಕಾಲ್ನಡಿಗೆಯಲ್ಲಿ ಸಾಗಿ ಅನೇಕ ಮನೆಗಳಿಗೆ ಭೇಟಿ ನೀಡಿದರು. ಮನೆಮನೆಗೂ ತೆರಳಿದ ಸಿದ್ಧರಾಮಯ್ಯನವರು ಮನೆಯ ಒಡತಿಯನ್ನು ಮಾತನಾಡಿಸಿ 200 ಯುನಿಟ್ ಉಚಿತ ವಿದ್ಯುತ್, ತಿಂಗಳಿಗೆ 2 ಸಾವಿರ ಹಣ, ಬಿಪಿಎಲ್ ಕಾರ್ಡ್‌ದಾರರಿಗೆ 10 ಕೆಜಿ ಅಕ್ಕಿಯ ಗ್ಯಾರಂಟಿ ಕಾರ್ಡ್ ನೀಡಿದರು. ನೀವು ಕಾಂಗ್ರೆಸ್‌ಗೆ ಮತ ಹಾಕಿ ಅಧಿಕಾರಕ್ಕೆ ತಂದರೆ ಈ ಸೌಲಭ್ಯಗಳನ್ನು ಒದಗಿಸುವ ಗ್ಯಾರಂಟಿ ನೀಡುತ್ತಿದ್ದೇವೆ ಎಂದು ಹೇಳುತ್ತಾ ಶಾಮನೂರಿನಾದ್ಯಂತ ಮತ ಯಾಚಿಸಿದರು.

ಇದೇ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಸಿದ್ಧರಾಮಯ್ಯ,  ನಾನು ಇಂದು ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧಿಸುವ ದಾವಣಗೆರೆ ಉತ್ತರ ಕ್ಷೇತ್ರದ ಶಾಮನೂರಿನ ಮನೆ, ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ನೀಡಿದ್ದೇನೆ. ಎಲ್ಲ ಶಾಸಕರು, ಮಾಜಿ ಶಾಸಕರು, ಎಂಪಿಗಳು ಎಲ್ಲರೂ ಹೀಗೆ ಮನೆಗಳಿಗೆ ತೆರಳಿ ಗ್ಯಾರಂಟಿ ಕಾರ್ಡ್ ನೀಡುತ್ತಾರೆ ಎಂದರು.

Leave a Comment

error: Content is protected !!