ಕೋವಿಡ್ ಸಮಯದ ಸೇವೆಯನ್ನೂ ಲೆಕ್ಕಿಸದೆ ಕಡೆಗಣಿಸಿರುವ ಸರ್ಕಾರ – ನೌಕರರ ಆಕ್ರೋಶ
ಸುದ್ದಿ360 ದಾವಣಗೆರೆ, ಮಾ.15: ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಹೊರಗುತ್ತಿಗೆ ನೌಕರರಾದ ನಾನ್ ಕ್ಲಿನಿಕಲ್ ಮತ್ತು ಡಿ ಗ್ರೂಪ್ ದಿನಗೂಲಿ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾ.14ರಿಂದ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ನೌಕರರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಸಂಜೆಯವರೆಗೂ ಸರ್ಕಾರದಿಂದ ಯಾವ ರೀತಿಯ ಸ್ಪಂದನೆ ಸಿಕ್ಕದೇ ಇರುವುದು ನೌಕರರಲ್ಲಿ ಪ್ರತಿಭಟನೆಯ ಕಿಚ್ಚನ್ನು ಹೆಚ್ಚಿಸಿದೆ.
ಈ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಹಾಗೂ ಇತರೆ ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಿ. ಹನುಮಂತಪ್ಪ ಮಾತನಾಡಿ, 195 ಹೊರಗುತ್ತಿಗೆ ಹಾಗೂ 45 ರಿಲೀವರ್ಸ್ ಸೇರಿದಂತೆ ಒಟ್ಟು 240 ಮಂದಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಾನಗರ ಪಾಲಿಕೆ ನೌಕರರಂತೆ ನಮ್ಮನ್ನೂ ಕಾಯಂಗೊಳಿಸಬೇಕು. ಕೋವಿಡ್ ಸಮಯದಲ್ಲಿ ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸಿದ್ದೇವೆ. ವೈದ್ಯರಿಗಿಂತ ಹೆಚ್ಚು ರಿಸ್ಕ್ ಮೈಮೇಲೆ ಹಾಕಿಕೊಂಡು ಕೆಲಸ ಮಾಡಿದ್ದೇವೆ. ಆದರೆ ವೈದ್ಯರಿಗೆ ಭತ್ಯೆ ನೀಡಲಾಗಿದೆ ನಮಗೆ ನೀಡಲು ಸರ್ಕಾರ ಮೀನಾಮೇಶ ಎಣಿಸುತ್ತಿದೆ ಎಂದು ಹೇಳಿದರು.
ಈ ಹಿಂದೆ ಸಚಿವ ಡಿ. ಸುಧಾಕರ್ ಅವರು ಸಿ.ಜಿ. ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಿಸ್ಕ್ ಅಲೋವೆನ್ಸ್ ನೀಡುವುದಾಗಿ ಭರವಸೆ ನೀಡಿದ್ದರು. ಇದುವರೆಗೂ ಈಡೇರಿಲ್ಲ. ಪ್ರತಿ ಹೊರಗುತ್ತಿಗೆ ನೌಕರನಿಗೆ ತಿಂಗಳಿಗೆ ಹತ್ತು ಸಾವಿರದಂತೆ 2 ವರ್ಷಕ್ಕೆ 2.40 ಲಕ್ಷ ರಿಸ್ಕ್ ಅಲೋವೆನ್ಸ್ ಬರಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ನಿರತರಾಗಿದ್ದರೂ ಇಂದು ಆಕ್ಸಿಜನ್ ಪ್ಲಾಂಟ್ ನಲ್ಲಿ ತಲೆದೋರಿದ್ದ ಸಮಸ್ಯೆಯನ್ನು ನಮ್ಮವರು ಹೋಗಿ ಸರಿಪಡಿಸಿ ಮಾನವೀಯತೆ ಮೆರೆದಿದ್ದಾರೆ. ನಮ್ಮ ಸೇವೆಗೆ ಜಿಲ್ಲಾಡಳಿತ ಸ್ಪಂದಿಸುತ್ತದೆ ಎಂಬ ನಿರೀಕ್ಷೆಯಲ್ಲಿ ನಾವು ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದೇವೆ ಎಂದು ಡಿ. ಹನುಮಂತಪ್ಪ ಹೇಳಿದರು.
ಈ ಸಂದರ್ಭದಲ್ಲಿ ಮಾಲತೇಶ್, ಪಂಚಾಕ್ಷರಿ, ಸುರೇಂದ್ರ, ತಿಮ್ಮಪ್ಪ, ತಿಪ್ಪೇಸ್ವಾಮಿ ಎಸ್, ಬಸವರಾಜ್, ಅರುಣ್ ಕುಮಾರ್, ಕರಿಬಸಪ್ಪ, ವಿನೋದಾಬಾಯಿ, ತಿಮ್ಮಮ್ಮ, ಅನಿತಾ ಲಕ್ಷ್ಮೀ, ರೇಣುಕಮ್ಮ, ಸರೋಜಮ್ಮ, ಶಾಂತಮ್ಮ ಸೇರಿದಂತೆ ಎಲ್ಲ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆಯಲ್ಲಿ ತೊಡಗಿದ್ದರು.
ನೌಕರರ ಪ್ರತಿಭಟನೆಯಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗುತ್ತಿರುವುದಂತು ಕಟುಸತ್ಯವಾಗಿದ್ದು, ಜಿಲ್ಲಾಡಳಿತ ನೌಕರರನ್ನು ಕರ್ತವ್ಯಕ್ಕೆ ಹಾಜರುಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.