ಸುದ್ದಿ360 ಬೆಂಗಳೂರು: ರಾಜ್ಯ ಪಠ್ಯಕ್ರಮದಂತೆ ಅಭ್ಯಾಸ ನಡೆಸುತ್ತಿರುವ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ (ಬೋರ್ಡ್) ಪರೀಕ್ಷೆ ನಡೆಸಲು ಹೈಕೋರ್ಟ್ ಹಸಿರು ನಿಶಾನೆ ನೀಡಿದೆ.
ಈ ಮೂಲಕ ಹೈಕೋರ್ಟ್ ವಿಭಾಗೀಯ ಪೀಠ ಈ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿದ್ದು, ಬೋರ್ಡ್ ಪರೀಕ್ಷೆಗೆ ಷರತ್ತು ಬದ್ಧ ಅನುಮತಿ ನೀಡಿದೆ. ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿರುವ ವಿಭಾಗೀಯ ಪೀಠ ಯಾವುದೇ ವಿದ್ಯಾರ್ಥಿಯನ್ನು ಫೇಲ್ ಮಾಡುವಂತಿಲ್ಲ ಎಂದು ಆದೇಶಿಸಿದೆ.
5 ಮತ್ತು 8ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಮಾರ್ಚ್ 27 ರಿಂದ ನಡೆಸಲು ಸೂಚಿಸಿದೆ. ಬೋರ್ಡ್ ಪರೀಕ್ಷೆ ಕುರಿತಾಗಿ ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಶುಕ್ರವಾರ ನೀಡಿದ್ದ ತೀರ್ಪು ಪ್ರಶ್ನಿಸಿ ಸರ್ಕಾರ ಶನಿವಾರವೇ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು.