ಕೆಆರ್ ಎಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ

ಸ್ವಚ್ಛ, ಸದೃಢ, ಸಮೃದ್ಧ, ಸಾಂಸ್ಕೃತಿಕ, ಹಸಿರು ಕರ್ನಾಟಕಕ್ಕಾಗಿ ನವ ಸೂತ್ರಗಳು

ಸುದ್ದಿ360 ದಾವಣಗೆರೆ, ಮಾ.17: ಮುಂಬರುವ ವಿಧಾನಸಭಾ ಚುನಾವಣೆ ಪ್ರಯುಕ್ತ ಕೆ ಆರ್ ಎಸ್ ಪಕ್ಷವು  ಸ್ವಚ್ಛ, ಸದೃಢ, ಸಮೃದ್ಧ, ಸಾಂಸ್ಕೃತಿಕ, ಹಸಿರು ಕರ್ನಾಟಕಕ್ಕಾಗಿ ನವ ಸೂತ್ರಗಳನ್ನೊಳಗೊಂಡ ಪ್ರಣಾಳಿಕೆ  ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ ಎಂದು ಕೆಅರ್ ಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಮಲ್ಲಪ್ಪ ಹಾಗೂ ಕಾನೂನು ಘಟಕದ ಅಧ್ಯಕ್ಷ ಬಿ.ಸೋಮಶೇಖರ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರಮುಕ್ತ ದಕ್ಷ ಆಡಳಿತ, ಆರೋಗ್ಯ, ಶಿಕ್ಷಣ, ಕೃಷಿ, ಮಹಿಳೆ ಮತ್ತು ಕುಟುಂಬ ಕಲ್ಯಾಣ, ಯುವಜನತೆ, ಪ್ರಾದೇಶಿಕತೆ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಮತ್ತು ಉದ್ದಿಮೆ ಮತ್ತು ಸಂಘಟಿತ/ ಅಸಂಘಟಿತ ಕಾರ್ಮಿಕರ ಕಲ್ಯಾಣ ಹೀಗೆ ಒಂಬತ್ತು ಸೂತ್ರಗಳನ್ನೊಳಗೊಂಡಿದೆ ಎಂದರು.

ದಾವಣಗೆರೆ ಜಿಲ್ಲೆಯ ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಕೆ.ಮಲ್ಲಪ್ಪ, ಮಾಯಕೊಂಡ ಕ್ಷೇತ್ರಕ್ಕೆ ಬಿ.ಸೋಮಶೇಖರ್, ಚನ್ನಗಿರಿ ಕ್ಷೇತ್ರಕ್ಕೆ ಮಂಜುನಾಥ್ ಗೌಡ  ಇವರನ್ನು ಕೆ.ಆರ್.ಎಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ.

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಯಾವೆಲ್ಲಾ ಯೋಜನೆಗಳನ್ನು ರೂಪಿಸಬೇಕು‌ ಜತೆಗೆ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯದ ಜನಸಾಮಾನ್ಯರ ಜೊತೆ ಮತ್ತು ಚಿಂತಕರು ಹಾಗೂ ತಜ್ಞರ ಜೊತೆ ಹಲವಾರು ಸಭೆಗಳು ಮತ್ತು ಸಂವಾದಗಳನ್ನು ನಡೆಸಿದ ನಂತರ ಪಕ್ಷವು ಈ  ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರದಲ್ಲಿ ಪ್ರಸ್ತುತ ಖಾಲಿ ಇರುವ 3 ಲಕ್ಷಕ್ಕಿಂತಲೂ ಹೆಚ್ಚಿನ ಹುದ್ದೆಗಳನ್ನು ಒಂದು ವರ್ಷದ ಒಳಗೆ ಭರ್ತಿ,  ಭ್ರಷ್ಟಾಚಾರ ರಹಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತಕ್ಕಾಗಿ ಮತ್ತು ಲಂಚ, ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಾಯುಕ್ತ ಬಲಪಡಿಸಲು ಕ್ರಮ. ರಾಜ್ಯದಲ್ಲಿ ಬಡತನ ನಿವಾರಣೆಗಾಗಿ ಸಂಪೂರ್ಣ ಮದ್ಯ ನಿಷೇಧ. ಶಿಕ್ಷಣದ ಪ್ರತಿ ಹಂತದಲ್ಲಿಯೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮತ್ತು ತಾಲ್ಲೂಕಿಗೊಂದು ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಥಿಕತ ನಿರ್ಮಾಣ, ಉದ್ಯೋಗಸೃಷ್ಟಿ ಗ್ರಾಮಸ್ವರಾಜ್ಯ, ವೈಜ್ಞಾನಿಕ ಬೆಳೆ ಮತ್ತು ಬೆಲೆ ಪದ್ಧತಿ ಜಾರಿ ಕೃಷಿ ಉತ್ಪನ್ನಗಳಿಗೆ ಗ್ರಾಮೀಣ ಭಾಗದಲ್ಲಿಯೇ ಮೌಲ್ಯವರ್ಧನೆಗೆ ಕ್ರಮ ಕೈಗೊಳ್ಳಲು ಮುಂದಾಗಲಾಗುವುದು ಎಂದು ಹೇಳಿದರು.

ಸಾಲಮುಕ್ತ ರೈತ, ಬಡತನಮುಕ್ತ ಹಳ್ಳಿಗಳು, ರಾಜ್ಯಾದ್ಯಂತ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಏರಿಸಲು ಕ್ರಮ. ರಾಜ್ಯದ ಪ್ರತಿ ಹಳ್ಳಿ, ಪಟ್ಟಣಕ್ಕೂ ಮಳೆ ನದಿ ಮೂಲದ ಕುಡಿಯುವ ನೀರಿನ ವ್ಯವಸ್ಥೆ. ರಾಜ್ಯದ ಪ್ರತಿ ಕೆರೆ ಮತ್ತು ಬಂಜರು ಭೂಮಿಗಳಲ್ಲಿ ಗ್ರಾಮ ಪಂಚಾಯಿತಿ ಮಾಲೀಕತ್ವದಲ್ಲಿ ಸೌರವಿದ್ಯುತ್ ಘಟಕ ಸ್ಥಾಪನೆ, ಸ್ಥಳೀಯವಾಗಿ ಪರಿಸರಸ್ನೇಹಿ ವಿದ್ಯುತ್‌ ಉತ್ಪಾದನೆಗೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದರು.

ನ್ಯಾಯಾಂಗವೂ ಸೇರಿದಂತೆ ಆಡಳಿತದ ಎಲ್ಲಾ ಹಂತದಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ರ ನೀಡುವ ಮೂಲಕ ಕನ್ನಡ ಕಡ್ಡಾಯ, ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾಥಮಿಕ ಆದ್ಯತೆ, ರಾಜ್ಯದ ನಿರುದ್ಯೋಗಿ ಪದವೀಧರರಿಗೆ ಕನಿಷ್ಠ 2000 ರೂಪಾಯಿ ಮಾಸಾಶನ ನಿರುದ್ಯೋಗ ಭತ್ಯೆ ಎಲ್ಲಾ ತರಹದ ಮಾಸಾಶನಗಳನ್ನು ಕನಿಷ್ಠ ರೂ.3000ಕ್ಕೆ ಏರಿಕೆ ಮಾಡುವುದು ಸೇರಿದಂತೆ ಇತರೆ ಸೂತ್ರಗಳ ಅನುಷ್ಠಾನಕ್ಕೆ ಮುಂದಾಗಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಎನ್.ಎಸ್.ಅಭಿಷೇಕ್, ಗುಡ್ಡಪ್ಪ, ಕೆ.ಎಸ್.ವೀರಭದ್ರಪ್ಪ, ಮಾಯಕೊಂಡದ ಕೆ.ಅಜ್ಜಪ್ಪ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!