ದಾವಣಗೆರೆ: ಚುನಾವಣೆಯ ಮುಂದೆ ಭರವಸೆ ನೀಡಿ ಮರೆತುಹೋಗುವ ಕಾಂಗ್ರೆಸ್ ಈಗ ಜನರಿಗೆ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದೆ. ಈಮೊದಲು 7೦ ವರ್ಷ ಅಧಿಕಾರದಲ್ಲಿದ್ದಾಗ ಕಡುಬು ತಿನ್ನುತ್ತಿದ್ದರಾ..? ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಹಣ, ಹೆಂಡದ ಬಲದಿಂದ ಚುನಾವಣೆ ಗೆಲ್ಲೋದಕ್ಕೆ ಆಗಲ್ಲ. ರಾಜ್ಯದಲ್ಲಿ ಬಿಜೆಪಿ ಪರ ಜನರ ಅಲೆ ಇದೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ವಿಜಯಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇದು ಸಮಾರೋಪ ಯಾತ್ರೆಯಲ್ಲ, ವಿಜಯಯಾತ್ರೆ ಆರಂಭ ಎಂದರು.
ಪ್ರಧಾನಿ ಮೋದಿಯವರನ್ನು ಇಡೀ ಜಗತ್ತೇ ಮೆಚ್ಚಿದೆ. ಮೋದಿ ಅವರು ಪ್ರಧಾನಿಯಾದ ಬಳಿಕ ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಅವರ ಶ್ರಮಕ್ಕೆ ಪ್ರತಿಫಲ ಸಿಗಬೇಕಾದ್ರೆ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಿದೆ. ನನಗೆ 80 ವರ್ಷ, ಈ ಚುನಾವಣೆ ಮುಗಿಯೋವರೆಗೂ ನಾನು ವಿಶ್ರಮಿಸೋದಿಲ್ಲ. ಬಿಜೆಪಿ ಕಾರ್ಯಕರ್ತರು ಕೂಡ ಸರ್ಕಾರದ ಯೋಜನೆಗಳನ್ನು ಮನೆ ಮನಗೆ ತಲುಪಿಸುವ ಮೂಲಕ ಕರ್ನಾಟಕದಲ್ಲಿ ಬಹುಮತ ಸರ್ಕಾರ ರಚನೆ ಮಾಡಲು ಶ್ರಮಿಸಬೇಕು ಎಂದರು.