ದಾವಣಗೆರೆ: ಅಶೋಕ ಅಂಡರ್‌ ಪಾಸ್ ಸಂಚಾರಕ್ಕೆ ಮುಕ್ತ – ತೊಡಕು ಜೀವಂತ

ಸುದ್ದಿ360 ದಾವಣಗೆರೆ ಏ.04: ನಗರದ ಅಶೋಕ ರಸ್ತೆ ರೈಲ್ವೆ ಗೇಟ್  ಮೂಲಕ ಹಾದು ಹೋಗುವ ವಾಹನ ಸವಾರರು ಇದೀಗ ಕೊಂಚ ರಿಲೀಫ್ ಆಗಿದ್ದಾರೆ.  ಇದರಿಂದ ಜನ ರೈಲ್ವೇ ಗೇಟ್ ಕಾಯುವುದು ತಪ್ಪಿರುವುದು ಎಷ್ಟು ಸತ್ಯವೋ ಹಾಗೆಯೇ ಕೆಲವು ಸಮಸ್ಯೆಗಳು ಉದ್ಭವಿಸಿರುವುದು ಅಷ್ಟೇ ಸತ್ಯವಾಗಿದೆ.

ಹೌದು ವಾಹನ ದಟ್ಟಣೆ ನಿಯಂತ್ರಿಸಲು ನಿರ್ಮಿಸಿರುವ ಅಂಡರ್ ಪಾಸ್ ಸೋಮವಾರದಿಂದ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ನಾಗರೀಕರ ಹಲವು ದಶಕಗಳ ಬೇಡಿಕೆ ಈಡೇರಿದಂತಾಗಿದೆ.

ಅಶೋಕ ಟಾಕೀಸ್ ಎದುರು ಎಡಕ್ಕೆ ಯು ಟರ್ನ್ ತೆಗೆದುಕೊಳ್ಳುವುದು ತುಂಬಾ ಕಷ್ಟ. ಅಂಡರ್ ಪಾಸ್ ಇನ್ನಷ್ಟು ಅಗಲ ಇದ್ದಿದ್ದರೆ ಅನುಕೂಲ ಆಗುತ್ತಿತ್ತು. ಹಬ್ಬದ ಸಂದರ್ಭದಲ್ಲಿ ವಾಹನ ಸಂಚಾರ ಹೆಚ್ಚಾದಾಗ ಇಲ್ಲಿನ ಸಮಸ್ಯೆ  ಇನ್ನೂ ಭೀಕರವಾಗುತ್ತದೆ ಎಂಬುದು ಇಲ್ಲಿ ದಿನ ನಿತ್ಯ ಸಂಚರಿಸುವವರಿಂದ ಕೇಳಿಬರುತ್ತಿರುವ ಮಾತು.

ಯು ಟರ್ನ್ ತಾಪತ್ರಯ

ಪಿಬಿ ರಸ್ತೆ ಕಡೆಯಿಂದ ಬರುವ ವಾಹನಗಳು ಸಲೀಸಾಗಿ ಅಂಡರ್‌ಪಾಸ್‌ಗೆ ಹೋಗುತ್ತವೆ. ಆದರೆ ಕೆ.ಆರ್ ರಸ್ತೆ ಮೂಲಕ ಅಶೋಕ ಚಿತ್ರಮಂದಿರದ ಎದುರಿಂದ ಬರುವ ವಾಹನಗಳು ಅಂಡರ್‌ಪಾಸ್‌ಗೆ ಹೋಗಲು ತ್ರಾಸದಾಯಕವಾಗಿದೆ. ಚಿತ್ರಮಂದಿರದ ಎದುರೇ ಎಡಕ್ಕೆ ಯು ಟರ್ನ್ ಪಡೆದು ಕೆಳ ರಸ್ತೆ ಸೇರಿಕೊಳ್ಳಬೇಕಾಗಿದ್ದು, ಇಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಕಾರು, ಎಂಯುವಿ, ಎಸ್‌ಯುವಿ, ಸರಕು ಸಾಗಣೆ  ವಾಹನಗಳು ಒಂದೇ ಬಾರಿಗೆ ತಿರುವು ತೆಗೆದುಕೊಳ್ಳಲು ಆಗುವುದಿಲ್ಲ. ಚಾಲಕರು ಎಡಕ್ಕೆ ತಿರುಗಿ, ಮತ್ತೆ ರಿವರ್ಸ್ ತೆಗೆದುಕೊಂಡು, ಮತ್ತೆ ಮುಂದೆ ಸಾಗಿ ಅಂಡರ್‌ಪಾಸ್‌ಗೆ ಹೋಗಬೇಕು. ಒಂದು ಕಾರು ಯು ಟರ್ನ್ ತೆಗೆದುಕೊಳ್ಳುವಾಗ ಹಿಂದೆ ಬರುವ ಎಲ್ಲ ವಾಹನಗಳು ನಿಲ್ಲಲೇಬೇಕಾಗುತ್ತದೆ.

ರೈಲುಗಳು ಸಂಚರಿಸುವ ಸಮಯದಲ್ಲಿ ಗೇಟ್ ಹಾಕುತ್ತಿದ್ದ ಕಾರಣ ರೈಲು ಹೋಗುವವರೆಗೂ ವಾಹನ ಸವಾರರು ಕಾಯಬೇಕಿತ್ತು. ದಿನಂಪ್ರತಿ ಹತ್ತಾರು ಬಾರಿ ಗೇಟ್ ಕಾಯುವ ಕೆಲಸದಿಂದ ಜನ ರಿಲೀಫ್ ಆಗಿದ್ದಾರಾದರೂ ಹೊಸ ಸಮಸ್ಯೆಗಳು ಉದ್ಭವಿಸಿದ್ದು, ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ಕಾದು ನೋಡಬೇಕಿದೆ.

ಮಂಡಿಪೇಟೆ ಕಡೆ ಹೋಗುವ ಮಾರ್ಗ

ಪಿಬಿ ರಸ್ತೆಯಿಂದ ಅಶೋಕ ರಸ್ತೆಗೆ ಹೊರಳುವ ವಾಹನಗಳು ರೈಲ್ವೆ ಗೇಟ್ ಎದುರು ಬಲ ತಿರುವು ಪಡೆದರೆ ಅಂಡರ್ ಪಾಸ್‌ಗೆ ಎಂಟ್ರಿ ಆಗುತ್ತವೆ. ಬಳಿಕ ಎಡಕ್ಕೆ ಯು ಟರ್ನ್ ತೆಗೆದುಕೊಂಡು ಮೇಲೇರಿದರೆ ರೈಲ್ವೆ ಗೇಟ್‌ನ ಮತ್ತೊಂದು ಬದಿ ತಲುಪುತ್ತವೆ. ಅಂಡರ್‌ಪಾಸ್‌ನಿಂದ ಹೊರ ಬಂದ ವಾಹನಗಳು ಅಶೋಕ ರಸ್ತೆ ಮೂಲಕ ಮಂಡಿಪೇಟೆ ಕಡೆ ಹೋಗಬಹುದು.

ಪಿಬಿ ರಸ್ತೆ – ಈರುಳ್ಳಿ ಮಾರುಕಟ್ಟೆ ಕಡೆ ಹೋಗುವ ಮಾರ್ಗ

ಇನ್ನೊಂದು ಬದಿಯಲ್ಲಿ ಕೆ.ಆರ್. ರಸ್ತೆ ಮೂಲಕ ಬರುವ ವಾಹನಗಳು ಅಶೋಕ ಚಿತ್ರಮಂದಿರದ ಎದುರು ಯು ಟರ್ನ್ ತೆಗೆದುಕೊಂಡು ಅಂಡರ್ ಪಾಸ್‌ಗೆ ಎಂಟ್ರಿ ಆಗುತ್ತವೆ. ಅಲ್ಲಿಂದ ಮುಂದೆ ಸಾಗಿ ಅಂಡರ್ ಪಾಸ್ ಮುಗಿದ ಬಳಿಕ ಎಡಕ್ಕೆ ತಿರುಗಿ ಹೊರಗೆ ಬರಬಹುದು. ಅಲ್ಲಿಂದ ಆಹಾರ್ 2000 ಕಡೆ ಹೋಗುವ ವಾಹನಗಳು ಮತ್ತೆ ಬಲಕ್ಕೆ ಯು ಟರ್ನ್ ತೆಗೆದುಕೊಂಡು ಶ್ರೀ ಲಿಂಗೇಶ್ವರ ದೇವಸ್ಥಾನದ ಎದುರಿನಿಂದ ಪಿಬಿ ರಸ್ತೆ ಕೂಡಿಕೊಳ್ಳಬಹುದು. ಇಲ್ಲವೇ ಅಂಡರ್‌ಪಾಸ್‌ನಿಂದ ಹೊರಬಂದು ನೇರವಾಗಿ ಈರುಳ್ಳಿ ಮಾರುಕಟ್ಟೆ ಕಡೆ ಸಾಗಬಹುದು.

admin

admin

Leave a Reply

Your email address will not be published. Required fields are marked *

error: Content is protected !!