ಮಂಗಳೂರು, ಏಪ್ರಿಲ್ 13: ರಾಜಕಾರಣದಲ್ಲಿ ಪಕ್ಷ ಬದಲಿಸೋದು ಸಾಮಾನ್ಯ ಆಗ್ತಾ ಇರುತ್ತೆ. ಅಸಮಾಧಾನಗೊಂಡವರ ಮನವೊಲಿಕೆ ಮಾಡುತ್ತೇವೆ. ಪಕ್ಷದಲ್ಲಿ ಎದ್ದಿರುವ ಅಸಮಾಧಾನ ಸರಿಪಡಿಸಲಾಗುತ್ತಿದೆ. ಕಾರ್ಯಕರ್ತರು ಗಟ್ಟಿ ಇದ್ದಾರೆ, ಇದರಿಂದ ಯಾವುದೇ ಹಾನಿಯಾಗುವುದಿಲ್ಲ ಬಹುತೇಕ ಕಡೆ ಪಕ್ಷದ ಭಿನ್ನಮತ ಶಮನ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಅಸಮಾಧಾನಗೊಂಡ ನಾಯಕರ ಜೊತೆ ಪಕ್ಷದ ಹಿರಿಯರು ಮಾತನಾಡುತ್ತಿರುವುದಾಗಿ ತಿಳಿಸಿದರು.
ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಇನ್ನೂ 12 ಕ್ಷೇತ್ರ ಉಳಿದಿದೆ. ಕೆಲವೆಡೆ ಆಕಾಂಕ್ಷಿಗಳು, ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ಕೊಟ್ಟಿದ್ದಾರೆ ಎಂದರು.
ಆರೋಪ ಸಾಬೀತು ಮಾಡಲಿ
ಅಸಮಾಧಾನಿತರ ಜೊತೆ ಹೈಕಮಾಂಡ್ ಮಾತನಾಡುತ್ತಿದೆ.. ನಾನು ಎಲ್ಲಾ ನಾಯಕರ ಜೊತೆ ಮಾತನಾಡಿದ್ದೇನೆ. ಭಿನ್ನಮತ ಶೀಘ್ರವೇ ಬಗೆಹರಿಯುವ ವಿಶ್ವಾಸ ಇದೆ. ಸವದಿ ಹಿರಿಯರು, ಸುಧೀರ್ಘ ರಾಜಕೀಯದಲ್ಲಿದ್ದಾರೆ. ಸವದಿಗೆ ಜನರಿಂದಲೂ ಒತ್ತಡ ಇದೆ, ಸಮಯ ಬೇಕು. ನೆಹರು ಓಲೇಕಾರ್ ಯಾವ ಆರೋಪ ಬೇಕಾದರೂ ಮಾಡಲಿ. ದಾಖಲೆ ಸಹಿತ 1,500 ಕೋಟಿ ಆರೋಪ ಸಾಬೀತು ಮಾಡಲಿ. ಕೇವಲ ಹೇಳಿಕೆ ಬೇಡ, ದಾಖಲೆ ನೀಡಲಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.