ಸುದ್ದಿ360 ದಾವಣಗೆರೆ, ಏ.23: ಕಳೆದ 33 ವರ್ಷಗಳಿಂದ ಲಿಂಗಾಯತರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸದ, ಕಾಂಗ್ರೆಸ್ ಈಗ ಓಲೈಕೆ ರಾಜಕಾರಣ ಮಾಡಲು ಮುಂದಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವೀರಶೈವ-ಲಿಂಗಾಯತರನ್ನು ವಿಭಜಿಸಲು ಪ್ರಯತ್ನಿಸಿದ್ದನ್ನು ಜನ ಮರೆತಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ಹೇಳಿದರು.
ಜಗದೀಶ್ ಶೆಟ್ಟರ್ ಶೆಟ್ಟರ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಾವುಟ ಬದಲಾದಾಕ್ಷಣ ಅವರಲ್ಲಿರುವ ಭಾವನೆಗಳು ಬದಲಾಗಲು ಸಾಧ್ಯವಿಲ್ಲ.
-ಡಾ.ಎ.ಎಚ್. ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ .
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಸಮುದಾಯ ಪ್ರಜ್ಞಾವಂತ ಸಮಾಜವಾಗಿದೆ. ಲಿಂಗಾಯತರನ್ನು ಓಲೈಸಿ ಅಧಿಕಾರಕ್ಕೆ ಬರ್ತಿವಿ ಅನ್ನುವ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಈ ಬೂಟಾಟಿಕೆಗೆ ಲಿಂಗಾಯತ ಸಮುದಾಯ ಮನ್ನಣೆ ನೀಡುವುದಿಲ್ಲ. ಬಿಜೆಪಿ ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದೆ. ಕಾಂಗ್ರೆಸ್ ನವರ ಕುತಂತ್ರಕ್ಕೆ ಲಿಂಗಾಯತ ಸಮುದಾಯ ಬಲಿಯಾಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿದ್ದಾಗ ಶ್ರೀರಾಮ ಮಂದಿರ ನಿರ್ಮಾಣ, ಜಮ್ಮು ಕಾಶ್ಮೀರದ 370ನೇ ವಿಧಿ ರದ್ಧತಿ, ಗೋಹತ್ಯೆ ನಿಷೇಧದ ಬಗ್ಗೆ ಇದ್ದ ಅವರ ಭಾವನೆ, ನಂಬಿಕೆ ಕಾಂಗ್ರೆಸ್ಗೆ ಹೋದಾಕ್ಷಣ ಬದಲಾಗಲು ಸಾಧ್ಯವಾ ಎಂದು ಪ್ರಶ್ನಿಸಿದರು.
ಶೆಟ್ಟರ್ಗೆ ಬಿಜೆಪಿಯಿಂದ ಆರು ಬಾರಿ ಅವಕಾಶ ನೀಡಿ, ಶಾಸಕರನ್ನಾಗಿ, ಸಚಿವರನ್ನಾಗಿ, ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಆಲ್ಲದೆ ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನವನ್ನೂ ಅಲಂಕರಿಸಿದ್ದರು. ಈ ಬಾರಿ ತಮಗೆ ಟಿಕೆಟ್ ಸಿಗಲಿಲ್ಲ ಎಂಬ ಏಕೈಕ ಕಾರಣಕ್ಕೆ ಪಕ್ಷ ತೊರೆದಿರುವುದು ಅವರ ಸ್ವಾರ್ಥ, ಅಧಿಕಾರದ ಲಾಲಸೆಯನ್ನು ತೋರಿಸುತ್ತಿದೆ ಎಂದರು.
ಜಗದೀಶ್ ಶೆಟ್ಟರ್ ಎಂದೂ ಪಕ್ಷದ ಬಗ್ಗೆ ಮತ್ತು ಮುಖಂಡರ ಬಗ್ಗೆ ಕೆಟ್ಟ ಮಾತನಾಡಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವ ಸಂತೋಷ್ಜೀ ಬಗ್ಗೆ ದೂಷಿಸುತ್ತಿರುವುದು ಸರಿಯಲ್ಲ.
-ಎಸ್.ಎ. ರವೀಂದ್ರನಾಥ್, ಶಾಸಕ.
ಬಿ.ಎಲ್. ಸಂತೋಷ್ ಅವರ ಬಗ್ಗೆ ಸಲ್ಲದ ಟೀಕೆ ಮಾಡುವುದಲ್ಲದೇ, ಅವರನ್ನು ಜಾತಿ ವಿಷಬೀಜಕ್ಕೆ ಜೋಡಿಸಲು ಪ್ರಯತ್ನಿಸಿ, ಶೆಟ್ಟರ್ ಆತ್ಮವಂಚನೆ ಮಾಡಿಕೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಪಾಲಿಕೆ ಸದಸ್ಯ ಕೆ. ಪ್ರಸನ್ನಕುಮಾರ್, ಮುಖಂಡರಾದ ಸುಧಾ ಜಯರುದ್ರೇಶ, ಡಿ.ಎಸ್. ಶಿವಶಂಕರ್ ಮತ್ತಿತರರು ಇದ್ದರು.