ಬೆಂಗಳೂರು; ರಾಷ್ಟ್ರಗೀತೆ ಹಾಡುವ ಸ್ಥಳಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸುವುದು, ಪಠ್ಯಪುಸ್ತಕ ಪರಿಷ್ಕರಣೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡುವುದು ಸೇರಿದಂತೆ ಹಲವು ನಿರ್ಧಾರಗಳಿಗೆ ಸಚಿವ ಸಂಪುಟ ಸಭೆ ಅನುಮೋದಿಸಿದೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಮಾತನಾಡಿ, ಪಠ್ಯ ಪರಿಷ್ಕರಣೆ, ಮತಾಂತರ ಬಿಲ್ ಜೊತೆಗೆ ಎಪಿಎಂಸಿ ಕಾಯ್ದೆಯೂ ರದ್ದುಪಡಿಸಲು ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಸಾರಿಗೆ ನೌಕರರ ವೇತನ 15ರಷ್ಟು ಪರಿಷ್ಕರಣೆಗೆ ಕ್ಯಾಬಿನೆಟ್ ಒಪ್ಪಿದೆ. 28 ಕೋಟಿ 13 ಲಕ್ಷ ಕೋಟಿ ವೆಚ್ಚದಲ್ಲಿ ಡಬಲ್ ಡೆಕ್ಕರ್ ಬಸ್ ಖರೀದಿಗೆ ನಿರ್ಧರಿಸಲಾಗಿದ್ದು, ಸಾರಿಗೆ ನಿಗಮಗಳ 79 ಕೋಟಿ ರೂ. ಮೋಟಾರ್ ವೆಹಿಕಲ್ ಟ್ಯಾಕ್ಸ್ ವಿನಾಯಿತಿಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣೆಗೆ ನಿರ್ಧರಿಸಲಾಗಿದ್ದು, ಆರ್ಎಸ್ಎಸ್ ಸಂಸ್ಥಾಪಕ ಕೇಶವ ಹೆಡ್ಗೇವಾರ್ ಭಾಷಣ, ಸಾವರ್ಕರ್, ಚಕ್ರವರ್ತಿ ಸೂಲಿಬೆಲೆ ಬರೆದ ಅಂಶಗಳನ್ನು ಪಠ್ಯದಿಂದ ತೆಗೆಯಲಾಗಿದೆ. ಮಕ್ಕಳು ಸರಿಯಾದ ವಿಚಾರ ಕಲಿಯಬೇಕೆಂದು ಕೆಲ ಬದಲಾವಣೆ ಮಾಡಿದ್ದೇವೆ. ನಾವು ತುಂಬಾ ಆಳವಾಗಿ ಹೋಗದೆ, ಯಾರಿಗೂ ಹೊರೆಯಾಗದಂತೆ ಸರಳುವಾಗಿ ಪಠ್ಯ ಪರಿಷ್ಕರಣೆ ಮಾಡಿದ್ದೇವೆ ಎಂದರು.