ಸುದ್ದಿ360 ದಾವಣಗೆರೆ: ಸರ್ಕಾರಿ ಬಸ್ಗಳಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿದ್ದು, ಅಂತೆಯೇ ಕಳ್ಳರ ಕೈಚಳಕಕ್ಕೂ ದಾರಿಯಾಗಿದೆ. ಬಸ್ ಹತ್ತಲು ಬಂದಿದ್ದ ಮಹಿಳೆಯೊಬ್ಬರ 1.80 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ ಘಟನೆ ಜಿಲ್ಲೆಯ ಹರಿಹರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿರುವುದರಿಂದ ಮಹಿಳೆಯರ ಬಸ್ ಸಂಚಾರ ಸಹಜವಾಗಿಯೇ ಹೆಚ್ಚಾಗಿದೆ. ಮಹಿಳೆಯರು ಜಾಗರೂಕತೆಯಿಂದ ಪ್ರಯಾಣ ಬೆಳೆಸಬೇಕಿದ್ದು, ಪೊಲೀಸ್ ಪ್ರಕಟಣೆಗಳನ್ನು ಪಾಲಿಸುವ ಮೂಲಕ ಕಳ್ಳರ ಕುಕೃತ್ಯವನ್ನು ತಡೆಯಬಹುದಾಗಿದೆ.
ಹರಿಹರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ 1.80 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ ಘಟನೆ ನಡೆದಿದೆ.
ಹರಿಹರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿಯ ಉಣಕಲ್ ನಿವಾಸಿ ಶೋಭಾ ಎಂಬುವವರು, 1.80 ಲಕ್ಷ ಮೌಲ್ಯದ 37 ಗ್ರಾಂ ತೂಕದ ಮಾಂಗಲ್ಯ ಸರ ಕಳೆದುಕೊಂಡವರಾಗಿದ್ದಾರೆ. ಪತಿ ಕೊಟ್ರೇಶ ಜತೆ ಶೋಭಾ, ಹುಬ್ಬಳ್ಳಿಯಿಂದ ಹೊನ್ನಾಳಿಯ ಹಿರೇಕಲ್ಮಠಕ್ಕೆ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಪೂಜೆ ಸಲ್ಲಿಸಲು ಬಂದಿದ್ದರು. ವಾಪಸ್ ಊರಿಗೆ ಹೋಗಲು ಹರಿಹರ ಬಸ್ ನಿಲ್ದಾಣದಲ್ಲಿ ಬಸ್ ಬದಲಾವಣೆ ಮಾಡಿಕೊಳ್ಳುವಾಗ ಈ ಕಳ್ಳತನ ಆಗಿರುವುದಾಗಿ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.