ಸುದ್ದಿ360 ದಾವಣಗೆರೆ: ಬಡವರ ಅನ್ನದ ಜತೆ ಕೇಂದ್ರ ಸರ್ಕಾರ ಆಟವಾಡುತ್ತಿದೆ ಇದು ಖಂಡನೀಯ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆಯುತ್ತಿದ್ದು, ರಾಜ್ಯ ಸರಕಾರ ಹತ್ತು ಕೆಜಿ ಅಕ್ಕಿ ನೀಡಲು ಬದ್ಧವಾಗಿದೆ. ಆದರೆ, “ಕೇಂದ್ರ ಸರಕಾರ ಅಕ್ಕಿ ಪೂರೈಸದೆ ಅಸಹಕಾರ ನೀತಿ ಅನುಸರಿಸುತ್ತಿರುವ ಕಾರಣ ತಕ್ಷಣಕ್ಕೆ ಅಕ್ಕಿ ಕೊಡಲಾಗುತ್ತಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಆಹಾರ ಸಚಿವ ಮುನಿಯಪ್ಪರ ಭೇಟಿಗೆ ಅವಕಾಶವನ್ನೂ ನೀಡದಿರುವುದು ಖಂಡನೀಯ ಎಂದ ಅವರು, ಕೇಂದ್ರದ ಗೋದಾಮಿನಲ್ಲಿ ಅಕ್ಕಿ ದಾಸ್ತಾನಿದ್ದರೂ ರಾಜ್ಯಕ್ಕೆ ಕೊಡುತ್ತಿಲ್ಲ ಎಂದು ಆರೋಪಿಸಿದರು.
“ಸರಕಾರ ಹೇಗೆ ನಡೆಸಬೇಕು ಎನ್ನುವುದು ನಮಗೆ ಗೊತ್ತಿದೆ. ಈಗ ಕೊಡುತ್ತಿರುವ ಅಕ್ಕಿಯ ಜತೆಗೆ ನಮ್ಮ ಪಾಲು ಸೇರಿಸಿ ಹತ್ತು ಕೆಜಿ ಕೊಡ್ತಿವಿ. ಕೇಂದ್ರದ ಕೆಲ ಸಚಿವರು ಅದಾನಿ, ಅಂಬಾನಿ ಜೊತೆ ಬೆಳೆದವರು. ಹೀಗಾಗಿ ಅವರಿಗೆ ಬಡವರ ಕಷ್ಟ ಗೊತ್ತಾಗುತ್ತಿಲ್ಲ,”
ಆರ್.ಬಿ. ತಿಮ್ಮಾಪುರ, ಅಬಕಾರಿ ಸಚಿವ.
“ಸೋಲಿನಿಂದ ಹತಾಶೆಗೆ ಒಳಗಾಗಿರುವ ಬಿಜೆಪಿ ಗೊಂದಲದಲ್ಲಿದೆ. ಬಿಜೆಪಿಯಲ್ಲಿ ಬಹಳ ಜನರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಗಿಳಿಸಿದ ಇವರು, ಈಗ ಪ್ರವಾಸ ಮಾಡುವಂತೆ ಅವರಿಗೇಕೆ ಹೇಳುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯವರು 600 ಭರವಸೆಗಳಲ್ಲಿ 50 ಕೂಡ ಈಡೇರಿಸಿಲ್ಲ” ಎಂದು ಕಿಡಿಕಾರಿದರು.
ಮದ್ಯ ದರ ಏರಿಕೆ ಮಾಡಿಲ್ಲ ಕೆಲ ವಿಚಾರವಾಗಿ ತೆರಿಗೆ ಹೆಚ್ಚು, ಕಡಿಮೆ ಮಾಡುವುದು ಇದ್ದೇ ಇರುತ್ತೆ. ಒಂದು ಕೈಯಲ್ಲಿ ಕೊಟ್ಟು, ಒಂದು ಕೈಯಲ್ಲಿ ಕಿತ್ತುಕೊಳ್ಳುತ್ತಾರೆ ಎನ್ನುವುದು ಅವರವರ ಭಾವನೆ. ನಾವು ಮದ್ಯ ದರ ಏರಿಕೆ ಮಾಡಿಲ್ಲ ಎಂದರು.