ಸುದ್ದಿ360, ದಾವಣಗೆರೆ: ವಿದ್ಯುತ್ ಶುಲ್ಕ ಹೆಚ್ಚಿಸಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ರೈಸ್ ಮಿಲ್ ಮಾಲೀಕರ ಸಂಘ, ದಲ್ಲಾಳಿಗಳ ಸಂಘ, ಮೆಕ್ಕೆಜೋಳ ವರ್ತಕರ ಸಂಘದ ಪದಾಕಾರಿಗಳು ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ವಿದ್ಯುತ್‌ಶಕ್ತಿ ನಿಯಂತ್ರಣ ಆಯೋಗ ಎಲ್ಲ ರೀತಿಯ ಗ್ರಾಹಕರ ಶುಲ್ಕ ಹೆಚ್ಚಿಸಿ ಆದೇಶಿಸಿದೆ. ಗ್ರಾಹಕರ ಕಷ್ಟ ಅರಿಯದೆ ಏಕಾಏಕಿ ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಿಸಲಾಗಿದೆ. ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಇದರಿಂದ ವಾಣಿಜ್ಯೋದ್ಯಮ, ಕೈಗಾರಿಕೆಗಳನ್ನು ನಡೆಸುವುದು ಕಷ್ಟವಾಗಿದೆ. ಹಲವು ಕೈಗಾರಿಕೆಗಳು ಇದರಿಂದ ಸಂಕಷ್ಟಕ್ಕೆ ಸಿಲುಕಿವೆ. ಎಂದು ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.
ಶುಲ್ಕ ಹೆಚ್ಚಳ ಮಾಡಿ ಮೇ ತಿಂಗಳಲ್ಲಿ ಕೆಇಆರ್‌ಸಿ ಆದೇಶ ಹೊರಡಿಸಿದ್ದು, ಈ ಶುಲ್ಕ ಹೆಚ್ಚಳವು ಏಪ್ರಿಲ್ ತಿಂಗಳಿನಿಂದಲೇ ಅನ್ವಯವಾಗುತ್ತದೆ ಎಂದು ತಿಳಿಸಿದೆ. ಇದರಿಂದ ವಾಣಿಜ್ಯ ಸಂಸ್ಥೆಗಳ ವಿದ್ಯುತ್ ಬಿಲ್‌ನ ನಿಗದಿತ ಶುಲ್ಕ ದುಪ್ಪಟ್ಟಾಗಿದೆ. ಅಲ್ಲದೆ ಮೊದಲಿದ್ದ ಸ್ಲಾಬ್ ವ್ಯವಸ್ಥೆ ತೆಗೆದು, ಬಳಸಿದ ಪ್ರತಿ ಯುನಿಟ್‌ಗೆ ಒಂದೇ ರೀತಿಯ ಶುಲ್ಕ ವಿಧಿಸಲಾಗುತ್ತಿದೆ. ಇದೆಲ್ಲದರ ಪರಿಣಾಮ ಮೊದಲಿಗಿಂತಲೂ ಎರಡು, ಮೂರು ಪಟ್ಟು ಹೆಚ್ಚು ವಿದ್ಯುತ್ ಬಿಲ್ ಬರುತ್ತಿದೆ ಎಂದು ತಿಳಿಸಿದರು.
ಅವೈಜ್ಞಾನಿಕ ಕ್ರಮದಿಂದಾಗಿ ಸಾಮಾನ್ಯ ಜನತೆ, ವಾಣಿಜ್ಯ ಉದ್ಯಮ ಮಾಲೀಕರು ಸೇರಿ ಎಲ್ಲ ವಿದ್ಯುತ್ ಗ್ರಾಹಕರೂ ಚಿಂತೆಗೀಡಾಗಿದ್ದಾರೆ. ನಿಗಮವು ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯದ ನಾನಾ ಸಂಘ ಸಂಸ್ಥೆಗಳು, ಆದೇಶವನ್ನು ಪುನರ್ ಪರಿಶೀಲಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗುರುವಾರ ಬಂದ್‌ಗೆ ಕರೆ ನೀಡಲಾಗಿದೆ. ಆದರೆ, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಶಾಂತಿ ಕಾಪಾಡಿಕೊಂಡು ಮನವಿ ಸಲ್ಲಿಸಿದ್ದು, ಸಮಸ್ಯೆ ಪರಿಹಾರಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಈ ವೇಳೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಕಾರ್ಯದರ್ಶಿ ಅಜ್ಜಂಪುರಶೆಟ್ರು ಶಂಭುಲಿಂಗಪ್ಪ, ಜಂಟಿ ಕಾರ್ಯದರ್ಶಿ ಕಿರುವಾಡಿ ಸೋಮಶೇಖರ್, ಟಿ.ಎಸ್. ಜಯರುದ್ರೇಶ್, ಕುಸುಮ್ ಶೆಟ್ರು, ಜಂಬಗಿ ರಾಧೇಶ್, ಕಾಸಲ್ ಅಮರನಾಥ, ಅದನೂರು ಮುಪ್ಪಣ್ಣ, ಬಿ.ಎಚ್. ಪ್ರಕಾಶ್, ಬುಳ್ಳಾಪುರ ಮಲ್ಲಿಕಾರ್ಜುನ್, ಐನಳ್ಳಿ ನಾಗರಾಜ್, ಜಾವೀದ್ ಸಾಬ್, ಎಂ.ಎನ್. ಶ್ರೀಧರ್ ಇತರರಿದ್ದರು.