ಸುದ್ದಿ360 ದಾವಣಗೆರೆ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಜೀವನ ಎಂಬ ಮೂರು ಪ್ರಮುಖ ಅಂಶಗಳು ಆಧಾರ ಸ್ಥಂಭಗಳು. ವಿದ್ಯಾರ್ಥಿಗಳು ತಮಗಿರುವ ಒತ್ತಡದ ನಡುವೆ ಆರೋಗ್ಯ ಮರೆಯುತ್ತಾರೆ. ಬೆಳಗಿನ ತಿಂಡಿ, ರಾತ್ರಿ ನಿದ್ದೆ ಸ್ಕಿಪ್ ಮಾಡುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಹದಗೆಟ್ಟು, ಓದಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಬಾಪೂಜಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಇಲ್ಲಿನ ವಿದ್ಯಾನಗರ ಮುಖ್ಯ ರಸ್ತೆಯಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ಡಿಆರ್‌ಆರ್ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಇಂಡೆಕ್ಕ್ಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಅಡಿಕ್ಷನ್ ಅತಿದೊಡ್ಡ ದುಶ್ಚಟ
ಅತಿ ಹೆಚ್ಚು ಸ್ಕ್ರೀನ್ ಟೈಮ್ ಮತ್ತು ಮೊಬೈಲ್ ಅಡಿಕ್ಷನ್, ಆಧುನಿಕ ಯುಗದ ವಿದ್ಯಾರ್ಥಿಗಳಿಗೆ ಇರುವ ಅತಿ ದೊಡ್ಡ ದುಶ್ಚಟವಾಗಿದೆ. ಇಂದಿನ ವಿದ್ಯಾರ್ಥಿಗಳು, ಮಕ್ಕಳು ಹೆಚ್ಚು ಸಮಯ ಮೊಬೈಲ್ ನೋಡುವುದರಲ್ಲೇ ಕಳೆಯುತ್ತಿದ್ದಾರೆ. ಮೊಬೈಲ್‌ನೊಂದಿಗೆ ಟಿವಿ, ಲ್ಯಾಪ್‌ಟಾಪ್ ಸ್ಕ್ರೀನ್ ವೀಕ್ಷಣೆ ಸಮಯ ಕೂಡ ಹೆಚ್ಚಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಹಲವು ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದರು.
ಮೊಬೈಲ್ ಅಡಿಕ್ಷನ್ ವಿದ್ಯಾರ್ಥಿಗಳನ್ನು ಒತ್ತಡಕ್ಕೆ ಸಿಲುಕಿಸುತ್ತಿದೆ. ಇದರೊಂದಿಗೆ ಬೆಟ್ಟಿಂಗ್ ಗೀಳು ಕೂಡ ವಿದ್ಯಾರ್ಥಿ ವಲಯದಲ್ಲಿ ಅಧಿಕವಾಗಿದೆ. ಇದರ ಪರಿಣಾಮ ಹಣದ ವಿಷಯದಲ್ಲಿ ಅವರು ಇನ್ನೂ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಒತ್ತಡ ನಿವಾರಣೆ ನಿಟ್ಟಿನಲ್ಲಿ ಮಕ್ಕಳು ಆರೋಗ್ಯಕರ ಜೀವನಶೈಲಿ ಹಾಗೂ ಆರೋಗ್ಯಕ್ಕೆ ಪೂರಕವಾಗಿರುವ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು” ಎಂದರು.
ನಿತ್ಯ ಜೀವನದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ ಅಭ್ಯಾಸ ರೂಢಿಸಿಕೊಳ್ಳಬೇಕು. ಶಿಸ್ತು, ಸಮಯ ಪಾಲನೆ, ಹಿರಿಯರಿಗೆ ಗೌರವ ನೀಡುವುದು, ಕುಟುಂಬ ಸದಸ್ಯರನ್ನು ಪ್ರೀತಿಸುವ, ಅವರ ಬಗ್ಗೆ ಕಾಳಜಿ ತೋರುವ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಒಂದರಿಂದ 10ನೇ ತರಗತಿ, ಪಿಯುಸಿ ಹಾಗೂ ಪದವಿ ಮತ್ತು ವೃತ್ತಿ ಜೀವನ ಎಂಬ ಮೂರು ಹಂತಗಳು ಒಂದೊಕ್ಕೊಂದು ಸಂಬಂಧ ಹೊಂದಿವೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆ ಮಾಡಿದರೆ ಒಳ್ಳೆಯ ವೃತ್ತಿ ಸಿಗುತ್ತದೆ. ಓದಿಗೆ ಯಾವುದೇ ಶಿಫಾರಸು ಬೇಕಾಗಿಲ್ಲ. ನಿರಂತರ ಅಭ್ಯಾಸ, ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ” ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಸಂಯೋಜನಾಧಿಕಾರಿ ಎಚ್.ಕೆ. ಮಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಆರ್‌ಆರ್ ಸರಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ಡಾ.ಎ.ಎಂ. ರವಿ, ಜಗದೀಶ್, ಕೆ.ಜಿ. ನಿರಂಜನ, ಜ್ಯೋತಿಶ್ರೀ, ಉದಯ ಕುಮಾರ್, ಉಪನ್ಯಾಸಕಿ ಸುನಂದಾ, ಕೆ.ಎಲ್. ಹರೀಶ್ ಇತರರಿದ್ದರು.