ಸುದ್ದಿ360 ದಾವಣಗೆರೆ: ಕೆನಡಾ(canada) ದಲ್ಲಿ ಉದ್ಯೋಗವಕಾಶಗಳು (job opportunities) ಮತ್ತು ಸವಾಲುಗಳು ಎಂಬ ವಿಷಯವಾಗಿ ಒಂದು ದಿನದ ಕಾರ್ಯಾಗಾರ (Workshop) ವನ್ನು ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ (GMIT) ಎಂಬಿಎ (MBA) ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರವನ್ನು ಎಂಬಿಎ ವಿದ್ಯಾರ್ಥಿಗಳಿಗೆ ಅದರಲ್ಲೂ ಹೊರದೇಶಗಳಿಗೆ ಹೋಗಿ ದುಡಿಯುವ ಮತ್ತು ಸವಾಲುಗಳನ್ನು ಎದುರಿಸುವ ವಿದ್ಯಾರ್ಥಿಗಳಿಗಾಗಿಯೇ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಕೆನಡಾ ದೇಶದಲ್ಲಿ ಹಲವು ವರ್ಷಗಳಿಂದ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ವೇಣುಗೋಪಾಲ್ ಎಸ್ ವಿದ್ಯಾರ್ಥಿಗಳೊಡನೆ ಬೆರೆತು ತಮ್ಮ ಅನುಭವದ ಮಾತುಗಳನ್ನು ಹೇಳುತ್ತಾ, ತಾವು ಮೊದಲ ಬಾರಿ ಕೆನಡಾ ದೇಶಕ್ಕೆ ಹೋದಾಗ ಆದಂತಹ ಅನುಭವ ಮತ್ತು ಕೆಲಸ ಗಿಟ್ಟಿಸಿಕೊಳ್ಳಲು ತಾವು ಎದುರಿಸಿದ ಸವಾಲುಗಳನ್ನು ಒಂದೊಂದಾಗಿ ವಿವರಿಸುತ್ತಾ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಯಾವುದೇ ಸಂದರ್ಭದಲ್ಲಿ ಕುಗ್ಗದೆ, ಸವಾಲುಗಳನ್ನು ಎದುರಿಸುತ್ತಾ ಮುನ್ನಡೆದರೆ ಏನನ್ನಾದರೂ ಸಾಧಿಸಬಹುದೆಂದು ಹೇಳಲು ನಾನೊಂದು ಜೀವಂತ ಉದಾರಣೆ ಎಂಬುದಾಗಿ ವಿದ್ಯಾರ್ಥಿಗಳಿಗೆ ತಮ್ಮ ಜೀವನಗಾಥೆಯನ್ನು ಹೇಳಿದರು.
ಇಂದಿನ ಸಂದರ್ಭದಲ್ಲಿ ಸಾಗರೊತ್ತರ ಉದ್ಯೋಗವಕಾಶಗಳು ಲಭ್ಯವಿದ್ದು, ನಿಮ್ಮಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಕೈಗಾರಿಕಾ ಕೌಶಲ್ಯತೆಗಳು, ಮತ್ತು ದೃಢ ನಿರ್ಧಾರ ಹೊಂದಿದ್ದರೆ ಎಲ್ಲಿ ಬೇಕಾದರೂ ಶಾಂತಿ ಮತ್ತು ಸುಖ ಜೀವನವನ್ನು ನಡೆಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂಬಿಎ ವಿಭಾಗದ ನಿರ್ದೇಶಕರಾದ ಡಾ ಬಿ ಬಕ್ಕಪ್ಪ ಮಾತನಾಡಿ ಮುಂಬರುವ ದಿನಗಳಲ್ಲಿ ವಿದೇಶಿ ವಿಶ್ವವಿದ್ಯಾಲಯಗಳೊಡನೆ ಒಡಂಬಡಿಕೆಯ ಮೂಲಕ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಸಾಗರೋತ್ತರ ಉದ್ಯೋಗವಕಾಶಗಳಿಗೆ ಹೆಚ್ಚಿನ ಪುಷ್ಟಿ ಸಿಗಲಿರುವುದು ಎಂದು ತಿಳಿಸಿದರು.
ಕಾಲೇಜಿನ ಶೈಕ್ಷಣಿಕ ವಿಭಾಗದ ಡೀನ್ ಮತ್ತು ಇಂಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ ಸುನಿಲ್ ಕುಮಾರ್ ಬಿಎಸ್ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಕೋರಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ ಬಸವರಾಜು ಪಿ ಎಸ್, ಸಂಪನ್ಮೂಲ ವ್ಯಕ್ತಿಯನ್ನು ಬರಮಾಡಿಕೊಳ್ಳುವುದರ ಮೂಲಕ ಎಲ್ಲಾ ಗಣ್ಯರಿಗೂ ಮತ್ತು ವಿದ್ಯಾರ್ಥಿಗಳಿಗೂ ಸ್ವಾಗತ ಕೋರಿದರು.
ಕಾರ್ಯಕ್ರಮದಲ್ಲಿ ವಿಭಾಗದ ಅಧ್ಯಾಪಕ ವರ್ಗದವರು ಮತ್ತು ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.