ಸುದ್ದಿ360, ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದಲ್ಲಿ 2023 ನೇ ಸಾಲಿನ ಎಂ ಬಿ ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ವಿಭಾಗದ ದಿಶಾ ಪೊರಂ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಬಹಳ ಅದ್ದೂರಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಉಡುಗೆ ತೊಡುಗೆ ಗಳಲ್ಲಿ ಮಿಂಚುತ್ತಾ ಲವಲವಿಕೆಯಿಂದ ಪಾಲ್ಗೊಂಡಿದ್ದು ಹರ್ಷವನ್ನುಂಟು ಮಾಡಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಟೆಕ್ಯೂಡ್ ಲ್ಯಾಬ್ಸ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಪ್ರೀತ್ ಮಾತನಾಡಿ, ವಿದ್ಯಾರ್ಥಿಗಳು ಕೆಲಸ ಹುಡುಕುವ ಅಭ್ಯರ್ಥಿಗಳಾಗದೆ, ಕೆಲಸ ನೀಡುವ ವಾಣಿಜ್ಯೋದ್ಯಮಿಗಳಾಗಬೇಕೆಂದು ಕರೆ ಕೊಟ್ಟರು. ಕೈಗಾರಿಕಾ ಕೌಶಲ್ಯದ ಜೊತೆಗೆ ಶಿಸ್ತು, ಮನೋಸ್ಥೈರ್ಯ, ಆತ್ಮವಿಶ್ವಾಸ ಇದ್ದರೆ ಉದಯೋನ್ಮುಖ ವಾಣಿಜ್ಯೋದ್ಯಮಿಗಳಾಗಿ ಹೊರಹೊಮ್ಮಬಹುದು ಎಂಬ ಕಿವಿಮಾತನ್ನು ಅವರು ಹೇಳಿದರು.
ಗೌರವ ಅತಿಥಿಗಳಾಗಿ ಬೆಂಗಳೂರಿನ ಕೊರೆಂಪೋ ಕಂಪನಿಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ನವೀನ್ ರಾಜ್ ಮಾತನಾಡಿ, ವಾಣಿಜ್ಯೋದ್ಯಮಿಗಳಾಗಲು ಬಯಸುವ ವಿದ್ಯಾರ್ಥಿಗಳಿಗೆ ನೀಡುವುದಾಗಿ ಮತ್ತು ವಿದ್ಯಾರ್ಥಿಗಳ ಬೆಳವಣಿಗೆಗೆ ಯಾವುದೇ ತರಹದ ಸಹಾಯಕ್ಕೂ ತಮ್ಮ ಕಂಪನಿ ಸಿದ್ಧವಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಅಂತಿಮ ವರ್ಷದ ಹೊರಹೋಗುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿಭಾಗದ ನಿರ್ದೇಶಕರಾದ ಡಾ ಬಿ ಬಕ್ಕಪ್ಪ ಮಾತನಾಡಿ, ಕಲಿಕೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ, ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು. ವಿಭಾಗವು ನಿಮ್ಮ ಸೇವೆಗೆ ಸದಾ ಸಿದ್ಧವಾಗಿದ್ದು, ವಿಭಾಗದ ಅಧ್ಯಾಪಕರುಗಳೊಡನೆ ಸದಾ ಸಂಪರ್ಕದಲ್ಲಿರಲು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ ಬಸವರಾಜು ಪಿ ಎಸ್, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್, ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.