ಮಹಾತ್ಮರ ಮಾರ್ಗದಲ್ಲಿ ನಡೆದರೆ ಅದುವೇ ಗುರುವಂದನೆ: ಶಿವಲಿಂಗ ಶಿವಾಚಾರ್ಯ ಶ್ರೀ

ಸುದ್ದಿ360 ದಾವಣಗೆರೆ, ಜೂ.19: ಗುರುವಿನ ಅನುಪಸ್ಥಿತಿಯಲ್ಲಿ ಅವರ ಮೌಲ್ಯಗಳು, ಉಪದೇಶಗಳು ಅನುಷ್ಠಾನವಾಗುತ್ತಿದ್ದರೆ ಅವರು ಶ್ರೇಷ್ಠ ಗುರು ಎನಿಸಿಕೊಳ್ಳುತ್ತಾರೆ. ಸಿದ್ಧಗಂಗಾ ಶ್ರೀಗಳು ಅಂತಹ ಶ್ರೇಷ್ಠರಲ್ಲಿ ಒಬ್ಬರಾಗಿದ್ದಾರೆ ಎಂದು ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಎವಿಕೆ ರಸ್ತೆಯ ಜಿಲ್ಲಾ ಗುರುಭವನದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚುಟುಕು ಸಾಹಿತ್ಯ ಪರಿಷತ್, ವಚನ ಸಾಹಿತ್ಯ ಪರಿಷತ್, ರಾಜ್ಯ ಸಮಾನ ಮನಸ್ಕರ ಕಲೆ, ಸಾಹಿತ್ಯ, ಸಂಗೀತ, ಕ್ರೀಡಾ ಸೇವಾ ಒಕ್ಕೂಟ, ತೆಲಿಗಿ ಸ್ಫೂರ್ತಿ ಪ್ರಕಾಶನ, ಯೋಗಾನಂದ ಯೋಗಕೇಂದ್ರ, ಬಜ್ಜಿ ಹನುಮಂತಪ್ಪ ಚಾರಿಟಬಲ್‌ ಟ್ರಸ್ಟ್‌ ಇವರ ಸಹಯೋಗದಲ್ಲಿ ನಡೆದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯುತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ದೇಶದ ಯಾವುದೇ ರಾಜಕಾರಣಿಗಳು, ಉನ್ನತ ಹುದ್ದೆಯಲ್ಲಿರುವವರು ಸೇರಿದಂತೆ ಅನೇಕ ಗಣ್ಯರು ಕರ್ನಾಟಕಕ್ಕೆ ಬಂದರೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದೇ ಹೋಗುತ್ತಿದ್ದರು. ಈಗಲೂ ಸಾವಿರಾರು ಮಂದಿ ಶ್ರೀಗಳ ಗದ್ದುಗೆ ದರ್ಶನ ಪಡೆಯುತ್ತಾರೆ. ಶ್ರೀಗಳು ಬಾಳಿ ಬದುಕಿದ ರೀತಿ ಎಲ್ಲರನ್ನೂ ಆಕರ್ಷಿಸುತ್ತದೆ ಎಂದರು.

ಮಹಾತ್ಮರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ನಿಸ್ವಾರ್ಥ ಸೇವೆ ಮಾಡಿದವರು ಯಾರೇ ಆದರೂ ಜನ ಮಾನಸದಲ್ಲಿ ಚಿರಸ್ಥಾಯಿಗಳಾಗುತ್ತಾರೆ. ಅಂತೆಯೇ ಶ್ರೀ ಶಿವಕುಮಾರ ಸ್ವಾಮೀಜಿಯವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಇಂದಿಗೂ ಜನಮಾನಸದಲ್ಲಿ ಜೀವಂತವಾಗಿದ್ದಾರೆ ಎಂದು ಹೇಳಿದರು.

ಹಣ, ಅಂತಸ್ತು, ಆಸ್ತಿಗಳುಳ್ಳವರು ಜನರ ಮಾನಸದಲ್ಲಿ ನೆಲೆಸುವುದಿಲ್ಲ. ಬದಲಿಗೆ ಹೃದಯ ಶ್ರೀಮಂತಿಕೆ, ಸಮಾಜಕ್ಕಾಗಿ ದುಡಿದವರು ಸಮಾಜವನ್ನು ಬೆಳಕಿನತ್ತ ಕೊಂಡೊಯ್ಯುವಲ್ಲಿ ಶ್ರಮಿಸಿದವರು ಜನಮಾನಸದಲ್ಲಿ ನೆಲೆಯಾಗುತ್ತಾರೆ. 2500 ವರ್ಷಗಳ ಹಿಂದೆ ಆಗಿ ಹೋಗಿರುವ ಬುದ್ಧನನ್ನು ನಾವು ಮರೆತಿಲ್ಲ. ಸಾವಿರ ವರ್ಷ ಹಿಂದಿದ್ದ ಬಸವಣ್ಣನನ್ನು ಇಂದಿಗೂ ಆರಾಸುತ್ತೇವೆ. 100 ವರ್ಷಗಳ ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯನ್ನು ನಾವು ಸ್ಮರಿಸುತ್ತೇವೆ. ಇನ್ನೂ ಸಾವಿರ ವರ್ಷಗಳು ಕಳೆದರೂ ಈ ಮಹನೀಯರನ್ನು ಜಗತ್ತು ಮರೆಯುವುದಿಲ್ಲ. ಅವರೆಲ್ಲರೂ ತಮ್ಮ ಬದುಕಿನುದ್ದಕ್ಕೂ ಅಪೂರ್ವ ಸೇವೆ ಮಾಡಿದ್ದರಿಂದ ಸಮಾಜ ಇಂದಿಗೂ ಸ್ಮರಿಸುತ್ತದೆ. ಈ ನಿಟ್ಟಿನಲ್ಲಿ ಸಿದ್ಧಗಂಗಾ ಶ್ರೀಗಳು ಇಂದಿಗೂ ಪ್ರಸ್ತುತರು ಎಂದರು.

ಕಡುಬಡತನದಿಂದ ಬಂದ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂಬ ಮಹತ್ತರ ಉದ್ದೇಶದೊಂದಿಗೆ ಸಿದ್ಧಗಂಗಾ ಶ್ರೀಗಳು ಬದುಕಿದರು. ಜೀವನದುದ್ದಕ್ಕೂ ಅದೇ ಮೌಲ್ಯದ ಅನುಷ್ಠಾನ ಮಾಡಿದರು. ಅವರು ಆರಂಭಿಸಿದ ಈ ಕಾರ್ಯ ಇಂದಿಗೂ ಮುಂದುವರಿಯುತ್ತಲೇ ಇದೆ ಎಂದು ಹೇಳಿದರು.

ಸಮಾರಂಭದಲ್ಲಿ ವಿವಿಧ ಜಿಲ್ಲೆಗಳ, ವಿವಿಧ ಕ್ಷೇತ್ರಗಳ 150ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು. ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಜಿ.ಎಚ್‌. ರಾಜಶೇಖರ್‌ ಗುಂಡಗಟ್ಟಿ ಅವರ ಸಂಪಾದಕತ್ವದಲ್ಲಿ ಮೂಡಿಬಂದ ‘ಭಕ್ತಿ ಕುಸುಮಾಂಜಲಿ’ ಕೃತಿ ಹಾಗೂ ಎಚ್‌.ಕೆ. ಸತ್ಯಭಾಮ ಅವರ ‘ಅಂತರ್ಪಟ’ ಕೃತಿಗಳು ಲೋಕಾರ್ಪಣೆಗೊಂಡವು.

ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಸ್.ಎ. ರವೀಂದ್ರನಾಥ್,  ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್‌. ಶಿವಯೋಗಿಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಮೇಯರ್‌ ಜಯಮ್ಮ ಗೋಪಿನಾಯ್ಕ್‌, ವೀರೇಶ್ವರ ಪುಣ್ಯಾಶ್ರಮದ ಗೌರವ ಕಾರ್ಯದರ್ಶಿ ಎ.ಎಚ್‌. ಶಿವಮೂರ್ತಿ, ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್‌ ಡಿಸೋಜ, ನಿವೃತ್ತ ಪ್ರಿನ್ಸಿಪಾಲ್‌ ಶಂಕುಂತಲ ಗುರುಸಿದ್ಧಯ್ಯ, ಯೋಗಾನಂದ ಯೋಗಕೇಂದ್ರದ ಶಿಕ್ಷಕ ಕೊಂಡಜ್ಜಿ ಆರ್‌. ಉಮೇಶ್‌, ವಕೀಲ ತ್ಯಾವಣಿಗೆ ಕೆ.ಎಂ. ಉಮೇಶ್‌, ಸ್ಫೂರ್ತಿ ಪ್ರಕಾಶನದ ಎಂ. ಬಸವರಾಜ್‌, ಶಿವಯೋಗಿ ಹಿರೇಮಠ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!