ಸುದ್ದಿ360, ಹುಬ್ಬಳ್ಳಿ ಸೆ.15: ನಗರದ ರಾಣಿ ಚನ್ನಮ್ಮ ಮೈದಾನ(ಈದ್ಗಾ)ದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದೆ.
ಅರವಿಂದ ಬೆಲ್ಲದ ನೇತೃತ್ವದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಪ್ರತಿಭಟನೆ
ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಗುರುವಾರ ಬೆಳಗ್ಗೆಯಿಂದ ಆರಂಭವಾದ ಪ್ರತಿಭಟನೆ ಅಹೋರಾತ್ರಿ ನಡೆಯಿತು. ಪಾಲಿಕೆಯ ಬಿಜೆಪಿ ಸದಸ್ಯರು ಆಯುಕ್ತರ ಕಚೇರಿಯಲ್ಲಿಯೇ ಮಲಗಿ ಪ್ರತಿಭಟಿಸಿದರು.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಶುಕ್ರವಾರ ಬೆಳಗ್ಗೆ ಬಂದ ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ತಾವು ಸಹ ಧರಣಿ ಕೂತು ಬೆಂಬಲ ಸೂಚಿಸಿದರು. ಸರಕಾರ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಗಸ್ಟ್ 31ರಂದೇ ಠರಾವು ಪಾಸಾಗಿದೆ. ಆದರೆ, ಆಯುಕ್ತರು ಈವರೆಗೂ ಅನುಮತಿ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ’ ಎಂದರು.
ಸರಕಾರದ ಹಿಡನ್ ಅಜೆಂಡಾ – ಆರೋಪ
ಮೈದಾನದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡದಂತೆ ಕೆಲವರು ಕೋರ್ಟ್ಗೆ ಹೋಗುತ್ತಿದ್ದಾರೆ. ಮೈದಾನ ಪಾಲಿಕೆ ಆಸ್ತಿಯಾಗಿದ್ದು ಆಯುಕ್ತರು ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ ಎಂದು ಕಳೆದ ಬಾರಿ ಕೋರ್ಟ್ ನಿರ್ದೇಶನ ನೀಡಿದೆ. ಹೀಗಿದ್ದಾಗಲೂ ಆಯುಕ್ತರು ಅನುಮತಿ ನೀಡಲು ಮೀನಮೇಷ ಮಾಡುತ್ತಿರುವುದು ನೋಡಿದರೆ, ಸರಕಾರ ಕುಮ್ಮಕ್ಕು ನೀಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೆ, ಇದರ ಹಿಂದೆ ಯಾವುದೋ ಹಿಡನ್ ಅಜೆಂಡಾ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಕಾನೂನು ಹೋರಾಟ ಅನಿವಾರ್ಯ
ಹುಬ್ಬಳ್ಳಿ ಅಂಜುಮನ್ ಸಂಸ್ಥೆಯವರು ಪದೇ ಪದ ಕೋರ್ಟ್ಗೆ ಹೋಗುತ್ತಿರುವುದು ಸರಿಯಲ್ಲ. ವರ್ಷದಲ್ಲಿ ಎರಡು ದಿನ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವರಿಗೂ ಅವಕಾಶ ನೀಡಲಾಗಿದೆ. ಅವರು ಹೀಗೆ ಮಾಡುತ್ತಿದ್ದರೆ, ನಾವು ಸಹ ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.