ದಾವಣಗೆರೆ: ವಿನಾಯಕ ಮೂರ್ತಿ ಶೋಭಾಯಾತ್ರೆ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಸಚಿವರಿಂದ ಅದ್ದೂರಿ ಚಾಲನೆ

ಸುದ್ದಿ360, ದಾವಣಗೆರೆ ಸೆ.26: ಇಲ್ಲಿನ ವಿನೋಬನಗರದ 2ನೇ ಮುಖ್ಯ ರಸ್ತೆಯ ಶ್ರೀವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿ  ಪ್ರತಿಷ್ಠಾಪಿಸಿದ್ದ ಶ್ರೀ ವಿನಾಯಕ ಮೂರ್ತಿಯ ವಿಸರ್ಜನೆಗಾಗಿ ಹೊರಟ ಶೋಭಾಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅದ್ದೂರಿ ಚಾಲನೆ ನೀಡಿದರು.

ಇಂದು ಮಂಗಳವಾರ ಹಮ್ಮಿಕೊಂಡಿದ್ದ ವಿನಾಯಕ ಮೂರ್ತಿಯ ವಿಸರ್ಜನಾ ಕಾರ್ಯಕ್ರಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಟ್ರ್ಯಾಕ್ಟರ್‍ ಚಲಾಯಿಸುವ ಮೂಲಕ ನೆರೆದ ಭಕ್ತಸಮೂಹದ ಮನಸೂರೆಗೊಂಡರು. ವಿನೋಬನಗರ 2ನೇ ಮುಖ್ಯರಸ್ತೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳದಿಂದ 400 ಮೀ. ದೂರದಲ್ಲಿರುವ ಮಸೀದಿವರೆಗೂ ಟ್ರ್ಯಾಕ್ಟರ್ ಚಾಲನೆ ಮಾಡಿದ ಸಚಿವರು  ಮಸೀದಿ ದಾಟಿದ ಬಳಿಕ ಶಾಂತಿಯುತವಾಗಿ ಮೆರವಣಿಗೆ ನಡೆಸಿ ಮೂರ್ತಿ ವಿಸರ್ಜಿಸುವಂತೆ ಆಯೋಜಕರಿಗೆ ತಿಳಿಸಿ ನಿರ್ಗಮಿಸಿದರು.

ಶೋಭಾಯಾತ್ರೆಯಲ್ಲಿ ನಾಸಿಕ್ ಡೋಲು, ಡೊಳ್ಳು ಕುಣಿತ, ನಂದಿಕೋಲು, ವೀರಗಾಸೆ, ಸಮಾಳ ಸೇರಿದಂತೆ ಹಲವು ಬಗೆಯ ಕಲಾತಂಡಗ ಜತೆಗೆ ಡಿಜೆ ಸಂಗೀತಕ್ಕೆ ಯುವಕರು ಹೆಜ್ಜೆ ಹಾಕುತ್ತ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಈ ಬಾರಿ ರಾಮಕೃಷ್ಣ ಆಶ್ರಮ ಎದುರು ಅಯೋಧ್ಯೆ ಶ್ರೀರಾಮ  ಮಂದಿರದ ಸೆಟ್ ಹಾಕಿ ಅದರೊಳಗೆ ಶ್ರೀರಾಮನ ಅವತಾರದಲ್ಲಿರುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಈ ಮಾರ್ಗದಲ್ಲಿ ಮಸೀದಿ ಎದುರು ಮೆರವಣಿಗೆ ಸಾಗುವ ಕಾರಣ ಶೋಭಾಯಾತ್ರೆ ವೇಳೆ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ನಿಯೋಜಿಸಿ, ಎಚ್ಚರಿಕೆ ವಹಿಸಲಾಗಿತ್ತು.

ಶೋಭಾಯಾತ್ರೆಯಲ್ಲಿ ಮೇಯರ್ ವಿನಾಯಕ ಪೈಲ್ವಾನ್, ಸ್ಥಳೀಯ ಪಾಲಿಕೆ ಸದಸ್ಯ ಎ. ನಾಗರಾಜ್, ಬಿಜೆಪಿ ಮುಖಂಡ ರಾಜನಹಳ್ಳಿ ಶಿವಕುಮಾರ್, ಸಮಿತಿ ಕಾರ್ಯದರ್ಶಿ ಡಿ.ಕೆ. ರಮೇಶ್, ಅಧ್ಯಕ್ಷ ಗುರುನಾಥ್‌ಬಾಬು, ಗೌರವಾಧ್ಯಕ್ಷ ಶಿವರಾಜ್ ದೇವರಮನಿ, ನಾಗರಾಜ್‌ಗೌಡ, ಮಂಜುನಾಥ್  ಸೇರಿದಂತೆ ಅನೇಕ ಮುಖಂಡರು ಭಕ್ತ ಸಮೂಹದೊಂದಿಗೆ ಪಾಲ್ಗೊಂಡಿದ್ದರು.

ಇಡೀ ಮೆರವಣಿಗೆಯನ್ನು ಕ್ಯಾಮೆರಾ ಹಾಗೂ ಡ್ರೋಣ್ ಮೂಲಕ ಚಿತ್ರೀಕರಿಸಲಾಗುತ್ತಿತ್ತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರದಿಂದ ಕರ್ತವ್ಯನಿರತರಾಗಿದ್ದರು. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಥಳದಲ್ಲಿ ಹಾಜರಿದ್ದು, ಬಂದೋಬಸ್ತ್ ನೋಡಿಕೊಳ್ಳುತ್ತಿದ್ದರು.

ಮೆರವಣಿಗೆಯು ವಿನೋಬನಗರ ಜುಮ್ಮ ಮಸೀದಿ ಎದುರು ಬಂದಾಗ, ಮಸೀದಿ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಗಣೇಶ ಮೂರ್ತಿಗೆ ಹೂವಿನ ಮಾಲೆ ಹಾಕುವ ಮೂಲಕ ಸೌಹಾರ್ದ ಮೆರೆದರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭವಾದ ಮೆರವಣಿಗೆ ವಿನೋಬನಗರ 2ನೇ ಮುಖ್ಯ ರಸ್ತೆಯ ಮೂಲಕ ಪಿ.ಬಿ. ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ (ಅರುಣ ಚಿತ್ರಮಂದಿರ)ದ ಮೂಲಕ ಸಂಜೆ 7.30ರ ಸುಮಾರಿಗೆ ಹರಳೆಣ್ಣೆ ಕೊಟ್ಟೂರು ಬಸಪ್ಪ ವೃತ್ತ (ರಾಮ್ ಅಂಡ್ ಕೋ) ತಲುಪಿತು.  ನಂತರ ವಿನೋಬನಗರ 1ನೇ ಮೇನ್‌ನಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನ ತಲುಪಿ, ಪಿ.ಬಿ. ರಸ್ತೆ ಮೂಲಕ ಸಾಗಲಿದ್ದು, ಬಳಿಕ ಬಾತಿ ಕೆರೆಯಲ್ಲಿ ಶ್ರೀ ವಿನಾಯಕ ಮೂರ್ತಿಯನ್ನು ವಿಸರ್ಜಿಸಲಾಗುವುದು.

Leave a Comment

error: Content is protected !!