ನಾನು ಯಾರ ಹಿಡಿತದಲ್ಲಿಯೂ ಇಲ್ಲ- ನಾನು ಸಕ್ರಿಯ ರಾಜಕಾರಣಿ, ರೆಡಿಮೇಡ್‍ ಫುಡ್‍ ಅಲ್ಲ ಎಂದು ಹೇಳಿದ ರೇಣುಕಾಚಾರ್ಯರ ಮಾತಿನ ಮರ್ಮವೇನು?

ಸುದ್ದಿ360, ಸೆ.27 ದಾವಣಗೆರೆ: ನಾನು ಬಿಜೆಪಿ ಕಟ್ಟಾಳು. ನಿನ್ನೆ ಮೊನ್ನೆ ಬಂದು ನನ್ನ ವಿರುದ್ಧ ಮಾತಾಡುವವರಿಗೆ ನಾನು ಮಹತ್ವಕೊಡುವ ಅಗತ್ಯವಿಲ್ಲ.  ರೈತಪರ ಹೋರಾಟ, ಕನ್ನಡಪರ ಹೋರಾಟ ಸೇರಿದಂತೆ ಅನೇಕ ಪ್ರತಿಭಟನೆ, ಚಳುವಳಿಯಲ್ಲಿ ಪಾಲ್ಗೊಂಡು ನೂರಾರು ಕೇಸುಗಳನ್ನು ಹಾಕಿಸಿಕೊಂಡಿರುವ ನಾನು ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆಯೇ (active politician) ಹೊರತು ರೆಡಿಮೇಡ್ ಫುಡ್ (readymade food) ಅಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ (m.p. Renukacharya) ಮಾರ್ಮಿಕವಾಗಿ ನುಡಿದಿದ್ದಾರೆ.

ಅವರು ಇಂದು ದಾವಣಗೆರೆಯ ತೊಗಟವೀರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ 32ನೇ ವರ್ಷದ ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಸಚಿವ ಸಿ.ಟಿ. ರವಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದೇನೆಯೇ ಹೊರತು ಹಾದಿಬೀದಿಯಲ್ಲಿ ಸಂಸದ ಸಿದ್ದೇಶ್ವರ್ ವಿರುದ್ಧ ನಾನು ಮಾತನಾಡಿಲ್ಲ. ನಾನು ಯಾರ ಹಿಡಿತದಲ್ಲಿಯೂ ಇಲ್ಲ. ನನ್ನನ್ನು ಯಡಿಯೂರಪ್ಪ ಬೆಳೆಸಿದ್ದು, ಹಾಗಾಗಿ ನನ್ನ ಶ್ರದ್ಧೆ ಯಡಿಯೂರಪ್ಪ ಮತ್ತು ಬಿಜೆಪಿಯ ಮೇಲಿದೆ.

-ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ

ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ 1990 ರಿಂದ ನಾನು ರಾಜಕಾರಣದಲ್ಲಿ ಸಕ್ರಿಯವಾಗಿದ್ದೇನೆ. ಬಿಎಸ್‌ವೈ ನೂರಾರು ಕೇಸ್‌ಗಳನ್ನು ಹಾಕಿಸಿಕೊಂಡು ಜೈಲುವಾಸವನ್ನು ಅನುಭವಿಸಿದ್ದಾರೆ. ನಾನೂ ಕೂಡ ಅವರಂತೆ ಕ್ಷೇತ್ರದ ಜನತೆಗಾಗಿ ಮತ್ತು ಹಿಂದುತ್ವಕ್ಕಾಗಿ ಶಾಸಕನಾಗುವ ಮುನ್ನವೇ ನೂರಾರು ಕೇಸುಗಳನ್ನು ಹಾಕಿಸಿಕೊಂಡು ಜೈಲಿಗೆ ಹೋಗಿಬಂದವನು. ಆದ್ದರಿಂದ ನಾನು ರೆಡಿಮೇಡ್ ಫುಡ್ ಅಲ್ಲ ಎಂದು ಹೇಳಿದರು.

ಮನೆಯಲ್ಲಿ ಕೂತರೆ ಸಂಘಟನೆಯಾಗುವುದಿಲ್ಲ. ರಾಜ್ಯದ ತುಂಬೆಲ್ಲಾ ಸಂಚರಿಸಿ, ಜನರ ದುಃಖ ದುಮ್ಮಾನ ಕೇಳಿದಾಗ ಮಾತ್ರ ಸಂಘಟನೆಯಾಗುತ್ತದೆ. ನಾನು ಕೋವಿಡ್‌ನಲ್ಲಿ ಹೇಗೆ ಕೆಲಸ ಮಾಡಿದ್ದೇನೆಂದು ರಾಜ್ಯದ ಜನತೆಗೆ ಗೊತ್ತಿದೆ. ವಿದೇಶದಿಂದಲೂ ಕೂಡ ನನಗೆ ಕರೆ ಬರುತ್ತಿದ್ದವು. ಒಬ್ಬ ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದರು.  ರಾಜಕಾರಣ ನಿಂತ ನೀರಲ್ಲ ಹರಿವ ನೀರು ಎಂದರು.

ಎದೆಬಗೆದು ತೋರಿಸಬೇಕಾ?

ರಾಜ್ಯಕ್ಕೆ ಬಿ.ಎಸ್. ಯಡಿಯೂರಪ್ಪ, ದೇಶಕ್ಕೆ ಮೋದಿ ಎನ್ನುವವನು ನಾನು. ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದೂ ಎಲ್ಲೂ ಹೇಳಿಲ್ಲ.  ಕ್ಷೇತ್ರದ ಅಭಿವೃದ್ಧಿಗಾಗಿ ಮಾತ್ರ ನಾನು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ್ದೆ. ನಾನು ಬಿಜೆಪಿ ಕಟ್ಟಾಳು ಎಂದು ಎದೆಬಗೆದು ತೋರಿಸಬೇಕಾ ಎಂದು ಪ್ರಶ್ನಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!