ಲೋಕಸಭೆ ಕಾಂಗ್ರೆಸ್ ಟಿಕೆಟ್ ಸಿಗುವ ವಿಶ‍್ವಾಸದಲ್ಲಿ ವಿನಯ್‍ಕುಮಾರ್ ಜಿಬಿ – ಸಮಸ್ಯೆ ಅರಿಯಲು ಜನ ಸಂಪರ್ಕ ಕಾರ್ಯ

vinaykumar-confident-of-getting-lok-sabha-congress-ticket-davangere

ಅ.2: ವೀಲ್ ಚೇರ್, ವಾಕರ್ ಮತ್ತು ಶ್ರವಣ ಸಾಧನ ವಿತರಣಾ ಕಾರ್ಯಕ್ರಮ

ಸುದ್ದಿ360 ದಾವಣಗೆರೆ, ಸೆ.29: (Davanagere) ಸಾಮಾಜಿಕ ಕಳಕಳಿಯ ಜೊತೆಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಕನಸು ಹೊತ್ತಿರುವ ನಾನು ಕಾಂಗ್ರೆಸ್‍ ಪಕ್ಷದಿಂದ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಭಲ ಆಕಾಂಕ್ಷಿಯಾಗಿದ್ದೇನೆ. ಅಂತೆಯೇ ಕಾಂಗ್ರೆಸ್‍ ಹೈಕಮಾಂಡ್‍ ಸೂಚಿಸಿರುವಂತೆ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಾ ಜನರ ಸಮಸ್ಯೆಗಳನ್ನು ತಿಳಿಯುತ್ತಿದ್ದೇನೆ ಎಂದು ಇನ್ಸ್ಟೈಟ್ಸ್ ಐಎಎಸ್ (insights ias) ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ (Vinay Kumar G.B) ತಿಳಿಸಿದರು.

ಅವರು ಇಂದು ಎಸ್.ಎಸ್. ಬಡಾವಣೆ,10ನೇ ಕ್ರಾಸ್ನಲ್ಲಿರುವ  ಅವರ ಜನಸಂಪರ್ಕ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2024ರ ಲೋಕಸಭೆಗೆ ದಾವಣಗೆರೆ ಜಿಲ್ಲೆಯಿಂದ ಸ್ಪರ್ಧಿಸಲು ಕಾಂಗ್ರೆಸ್‍ ಪಕ್ಷದಿಂದ ಟಿಕೆಟ್ ಸಿಗುವ ವಿಶ್ವಾಸ  ವ್ಯಕ್ತಪಡಿಸಿದರು.

ಐಎಎಸ್, ಐಪಿಎಸ್‍ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಪಾಠ ಹೇಳುವ ನಾನು ಕನ್ನಡ  ಇಂಗ್ಲಿಷ್ ಮತ್ತು ಹಿಂದಿಯಲ್ಲಿ ವಿಷಯ ಮಂಡನೆ ಮಾಡುವ ಸಾಮರ್ಥ್ಯ ಹೊಂದಿರುವುದು ಕ್ಷೇತ್ರದ ಕುರಿತಾದ ಸಮಸ್ಯೆಗಳನ್ನು ಪ್ರಸ್ತಾಪಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಸಹಕಾರಿಯಾಗಿದೆ. ಇದೇ ವಿಷಯವಾಗಿ ಪಕ್ಷದ ವರಿಷ್ಠರು ಸೇರಿದಂತೆ ಹಿರಿಯ ರಾಜಕಾರಣಿಗಳು ನನ್ನ ಟಿಕೆಟ್‍ ಆಕಾಂಕ್ಷೆಗೆ ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಕಳೆದ ಐದು ವರ್ಷಗಳ ಹಿಂದೆಯೇ ಕಾಂಗ್ರೆಸ್‍ ಸದಸ್ಯತ್ವ ಪಡೆದಿದ್ದು, ಮೂರು ವರ್ಷಗಳಿಂದ ಸಕ್ರಿಯನಾಗಿ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ದಾವಣಗೆರೆ ಜಿಲ್ಲೆಯ 8 ಕ್ಷೇತ್ರಗಳ ಗ್ರಾಮೀಣ ಪ್ರದೇಶದಲ್ಲಿ ಓಡಾಡಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮ ವಾಸ್ತ್ತವ್ಯ ಮಾಡುವ ಮೂಲಕ ಜನರಿಗೆ ಇನ್ನೂ ಹತ್ತಿರವಾಗುವ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ.

ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಜೊತೆ ಟಿಕೆಟ್ ನೀಡುವ ಕುರಿತು ಮಾತನಾಡಿದ್ದೇನೆ.  ಶಾಮನೂರು ಶಿವಶಂಕರಪ್ಪರನ್ನು ಸದ್ಯದಲ್ಲಿಯೇ ಭೇಟಿ ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳುತ್ತೇನೆ.  ಚನ್ನಯ್ಯ ಒಡೆಯರ್ ಜೊತೆ ಓಡಾಡಿದವರು ನಮ್ಮ ಜೊತೆ ಇದ್ದಾರೆ. ಟಿಕೆಟ್ ಸಿಕ್ಕರೆ ಪ್ರಚಂಡ ಬಹುಮತದೊಂದಿಗೆ ಗೆಲ್ಲುವುದಲ್ಲದೆ, ಕ್ಷೇತ್ರದಿಂದ ಮೊದಲ್ಗೊಂಡು ಹಂತಹಂತವಾಗಿ ಬಿಜೆಪಿ ದೂಳಿಪಠವಾಗಲಿದೆ. ಆ ನಿಟ್ಟಿನಲ್ಲಿ ಪಕ್ಷದ ಸಂಘಟನ  ರಾಜಕೀಯ ಸುನಾಮಿ ಆಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ವೆಯಲ್ಲಿ ಟಾಪ್

ಲೋಕಸಭಾ ಅಭ್ಯರ್ಥಿಗಾಗಿ  ಕಾಂಗ್ರೆಸ್ ಪಕ್ಷದಲ್ಲಿ ನಡೆಸುತ್ತಿರುವ ಸುನೀಲ್ ಅವರ ಸರ್ವೆಯಲ್ಲಿ ನನ್ನ ಹೆಸರು ಟಾಪ್ ನಲ್ಲಿ ಬಂದಿದೆ ಎಂದು ತಿಳಿಸಿದ ಅವರು, ಕ್ರಾಂತಿಕಾರಕ ಬದಲಾವಣೆ ಆಗಬೇಕೆಂಬ ಬಯಕೆ ನನ್ನದಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸುವ ಜೊತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಕೋಮುಗಲಭೆ, ಭಾವನೆಗಳ ಆಧಾರದ ಮೇಲೆ ರಾಜಕಾರಣ ಮಾಡುವವನಲ್ಲ. ನನ್ನದು ಅಭಿವೃದ್ಧಿ, ಸಾಮರಸ್ಯ, ಎಲ್ಲರನ್ನೂ ಒಂದಾಗಿಸುವ ರಾಜಕಾರಣ ಎಂದು ಹೇಳಿದರು.

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪರ ಜೊತೆಯೂ ಪಕ್ಷ ಸಂಘಟನೆ ಕುರಿತಂತೆ ಮಾತನಾಡಿದ್ದೇನೆ. ದಾವಣಗೆರೆ ಲೋಕಸಭೆ ವ್ಯಾಪ್ತಿಯ ಎಂಟು ವಿಧಾನಸಭಾ  ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಗೆದ್ದಿದೆ. ನಾನು ಹೋದ ಕಡೆಗಳಲ್ಲಿ ಎಲ್ಲರೂ ವಿಶ್ವಾಸ, ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು, ಮತ್ತಷ್ಟು ಸದೃಢಗೊಳಿಸುವ ಆಲೋಚನೆ ನನ್ನದಾಗಿದೆ ಎಂದರು.

ಅ.2: ವೀಲ್ ಚೇರ್, ವಾಕರ್ ಮತ್ತು ಶ್ರವಣ ಸಾಧನ ವಿತರಣಾ ಕಾರ್ಯಕ್ರಮ

ವಿನಯಕುಮಾರ್ ಜಿ.ಬಿ  ಅಭಿಮಾನಿಗಳ ಬಳಗ ಕಕ್ಕರಗೊಳ್ಳ ಇವರ ಆಶ್ರಯದಲ್ಲಿ  ಅ.2 ರಂದು ಬೆಳಗ್ಗೆ 11 ಕ್ಕೆ  ನಗರದ ಪಿಬಿ ರಸ್ತೆಯಲ್ಲಿರುವ ಅಭಿನವ ರೇಣುಕಾ ಮಂದಿರದಲ್ಲಿ ವಿಕಲಚೇತನರಿಗೆ ವೀಲ್ ಚೇರ್, ವಾಕರ್ ಮತ್ತು ಶ್ರವಣ ಸಾಧನ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು  ಇನ್ಸೈಟ್ಸ್‍  ಐಎಎಸ್ ಸಂಸ್ಥೆಯ ಸಂಸ್ಥಾಪಕ  ನಿರ್ದೇಶಕರಾದ ವಿನಯ ಕುಮಾರ್ ಜಿ.ಬಿ ಕಕ್ಕರಗೊಳ್ಳ ಹೇಳಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿ ಜನ್ಮದಿನಾಚರಣೆ ಹಾಗೂ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಸಾಣೆಹಳ್ಳಿ ತರಳಬಾಳು ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾನಿಧ್ಯ ವಹಿಸಲಿದ್ದಾರೆ. ಕಾಗಿನೆಲೆ ಗುರುಪೀಠದ  ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ವಾಲ್ಮೀಕಿಗುರುಪೀಠದ ಪ್ರಸನ್ನಾನಂದ ಪುರಿ ಶ್ರೀ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು, ತಮ್ಮ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿರುವುದಾಗಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ ನಂದಿಗುಡಿ ಮಠದ ಶ್ರೀ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಸಲಕರಣೆಗಳ ವಿತರಣೆ ಮಾಡಲಿದ್ದಾರೆ. ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಹೊಸದುರ್ಗದ ಶ್ರೀ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಡಾ. ಬಸವ ಮಡಿವಾಳ ಮಾಚೀದೇವ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಜಿ, ಮೌಲ್ವಿ ಶಾಹಿದ್ ರಜಾ ಪುಷ್ಪನಮನ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!