ಸುದ್ದಿ360 ದಾವಣಗೆರೆ, ಅ.1: ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಬಂಧಿಸಿ, ಜೂಜಾಟದಲ್ಲಿ ತೊಡಗಿಸಿದ್ದ ಒಟ್ಟು 42,000/- ರೂ ನಗದು ಹಣ ಮತ್ತು ಮಟ್ಕಾ ಜೂಜಾಟದ ಸಾಮಾಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈತ ಜಿಲ್ಲೆಯ ಹೊನ್ನಾಳಿ ಪಟ್ಟಣದ ಟಿ.ಬಿ ಸರ್ಕಲ್ ನಿಂದ ಬಸ್ ನಿಲ್ದಾಣದ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿರುವ ಅಂಗಾಳ ಪರಮೇಶ್ವರಿ ಗ್ಯಾರೇಜಿನ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ. ಈ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ರವರು ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಸಾದ್ ಪಿ ಹಾಗೂ ಸಿಬ್ಬಂದಿಯವರಾದ ಪ್ರಕಾಶ, ಗೋವಿಂದರಾಜ್, ಮುತ್ತುರಾಜ್, ಮಲ್ಲಿಕಾರ್ಜುನ ಹಾದಿಮನಿ, ಲಿಂಗರಾಜ್ ರವರೊನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ದಾಳಿಗೆ ಸೂಚಿಸಿದ್ದರು.
ಅ.30ರಂದು ಸ್ಥಳಕ್ಕೆ ಭೇಟಿ ಮಾಡಿದ ಪೊಲೀಸ್ ತಂಡ ಅಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಅರೋಪಿತನಾದ ಸುನೀಲ್ ಹೊನ್ನಾಳಿ ತಾ. ಈತನನ್ನು ಹಿಡಿದು ಈತನಿಂದ ಜೂಜಾಟದಲ್ಲಿ ತೊಡಗಿಸಿದ್ದ ಒಟ್ಟು 42,000/- ರೂ ನಗದು ಹಣ ಮತ್ತು ಮಟ್ಕಾ ಜೂಜಾಟದ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್ ಬಿ ಬಸರಗಿ ಇವರುಗಳು ಪ್ರಶ೦ಸನೆ ವ್ಯಕ್ತಪಡಿಸಿರುತ್ತಾರೆ.