ಸುದ್ದಿ360, ದಾವಣಗೆರೆ (davangere), ಅ.4: ಯಾವ ವಿದ್ಯಾರ್ಥಿಗಳು ನಿಷ್ಠೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುತ್ತಾರೋ ಹಾಗೂ ಗುರು ಹಿರಿಯರಿಗೆ ಗೌರವ ಕೊಡುತ್ತಾರೋ ಅಂತಹ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಹೋಗಬಲ್ಲರು ಎಂದು ಪದ್ಮಶ್ರೀ ಪುರಸ್ಕೃತರು, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು ಆದ ಮಂಜಮ್ಮ ಜೋಗತಿ (Manjamma Jogati) ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದ ಮೊದಲ ವರ್ಷದ ಇಂಜಿನಿಯರಿಂಗ್ ಮತ್ತು ಬಿಸಿಎ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಇಂಡಕ್ಷನ್ ಪ್ರೋಗ್ರಾಮ್ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಅತಿ ಮುಖ್ಯ, ಶಿಕ್ಷಣದಿಂದ ವಿನಯ, ಶ್ರದ್ಧೆ, ಭಕ್ತಿ ಮತ್ತು ನಿಷ್ಠೆ ಬೆಳೆಸಿಕೊಳ್ಳಬಹುದಾಗಿದೆ. ಶಿಕ್ಷಣ ಅರಿತ ಯಾವುದೇ ವಿದ್ಯಾರ್ಥಿ ಸಮಯವನ್ನು ವ್ಯರ್ಥ ಮಾಡಲಾರ. ನೀವೆಲ್ಲ ಸಮಯಕ್ಕೆ ಗೌರವ ಕೊಡುವುದರ ಮುಖಾಂತರ ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕೆಂದು ತಿಳಿಸಿದ ಅವರು ತಮ್ಮ ಜೀವನದಲ್ಲಾದ ಕಹಿ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ತಾವು ನಡೆದು ಬಂದ ಹಾದಿ ಮತ್ತು ಇತ್ತೀಚಿಗೆ ಕೊಡ ಮಾಡಿದ ಪದ್ಮಶ್ರೀ ಪ್ರಶಸ್ತಿಯ ಸನ್ನಿವೇಶದವರೆಗೂ ವಿದ್ಯಾರ್ಥಿಗಳಿಗೆ ವಿವರಿಸಿದರು.
ಜಿಎಂ ವಿಶ್ವವಿದ್ಯಾಲಯದ ಸಹ ಉಪಕುಲಪತಿಗಳಾದ ಡಾ ಎಚ್ ಡಿ ಮಹೇಶಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಿದ್ದು, ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಕರೆಕೊಟ್ಟರು. ಜಿಎಂ ಮಹಾವಿದ್ಯಾಲಯದ ಮೊದಲ ವರ್ಷದ ವಿದ್ಯಾರ್ಥಿಗಳಾಗಿ ಪ್ರವೇಶ ಪಡೆದಿರುವುದು ನಮ್ಮೆಲ್ಲರಿಗೂ ಅತೀವ ಸಂತೋಷವನ್ನುಂಟು ಮಾಡಿದೆ ಎಂದು ವಿದ್ಯಾರ್ಥಿಗಳಿಗೆ ಧನ್ಯವಾದಗಳು ಅರ್ಪಿಸಿದರು.
ಜಿಎಂ ವಿಶ್ವವಿದ್ಯಾಲಯದ ಡೀನ್ ಫಾರ್ ಫ್ಯಾಕಲ್ಟಿ ಆಫ್ ಇಂಜಿನಿಯರಿಂಗ್ ಡಾ ಜಿ ಎಮ್ ಪಾಟೀಲ್ ಮಾತನಾಡಿ, ಒಂದು ವಾರಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದ ಗಣ್ಯಾತಿ ಗಣ್ಯರುಗಳು, ತಜ್ಞರುಗಳು ಆಗಮಿಸಲಿದ್ದು, ಮೊದಲ ಹೆಜ್ಜೆಯಾಗಿ ವಿದ್ಯಾರ್ಥಿಗಳನ್ನು ಕೈಗಾರಿಕೆಗಳಿಗೆ ತಕ್ಕಂತೆ ತಯಾರು ಮಾಡಲಿದ್ದಾರೆ ಎಂದು ತಿಳಿಸಿದರು. ನಂತರ ವಿದ್ಯಾರ್ಥಿಗಳಿಂದ ಪ್ರಮಾಣವಚನವನ್ನು ಬೋಧಿಸಿದರು.
ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಶ್ವೇತಾ ಮರಿಗೌಡರ್, ಎಲ್ಲಾ ವಿದ್ಯಾರ್ಥಿಗಳಿಗೂ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ, ಜಿಎಂ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ ಸುನಿಲ್ ಕುಮಾರ್ ಬಿಎಸ್, ಡೀನ್ ಫಾರ್ ಫ್ಯಾಕಲ್ಟಿ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಡಾ ಬಸವರಾಜ ಸ್ವಾಮಿ, ವಿವಿಧ ವಿಭಾಗಗಳ ಮುಖ್ಯಸ್ಥರುಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ನೆರವೇರಿಸಿದರು.