ಸುದ್ದಿ360 ದಾವಣಗೆರೆ ಅ.05: ಮಹಿಳೆಯರ ಸುರಕ್ಷತೆಗಾಗಿ ಸಾಕಷ್ಟು ಕಾಯ್ದೆ, ಕಾನೂನುಗಳು ಜಾರಿಯಲ್ಲಿವೆ. ಇವುಗಳ ಅರಿವು ಮಹಿಳೆಯರಿಗೆ ಶ್ರೀರಕ್ಷೆಯಿದ್ದಂತೆ. ಪ್ರತಿಯೊಬ್ಬರೂ ಇವುಗಳನ್ನು ಅರಿತುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಇಂದು ಗುರುವಾರ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಕಾನೂನು ಅರಿವು ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಶಕಗಳ ಹಿಂದಿನ ಸಮಾಜದಲ್ಲಿ ಪ್ರತಿ ಹಂತದಲ್ಲೂ ಮಹಿಳೆಯರ ಮೇಲೆ ಶೋಷಣೆ, ದೌರ್ಜನ್ಯ ನಡೆಯುತ್ತಿತ್ತು. ಇದನ್ನು ಗಮನಿಸಿ ಅವರ ಸುರಕ್ಷತೆಗಾಗಿ ವರದಕ್ಷಿಣೆ ನಿಷೇಧ, ಬಾಲ್ಯ ವಿವಾಹ ಕಾಯ್ದೆ ನಿಷೇಧ, ಪೋಕ್ಸೋ ಮೊದಲಾದ ಕಾಯ್ದೆ, ಕಾನೂನುಗಳು ಜಾರಿಗೆ ಬಂದಿವೆ. ಇದರಿಂದಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ದೌರ್ಜನ್ಯ ನಿಂತಿಲ್ಲ. ಹಾಗಾಗಿ ತಮಗಾಗಿಯೇ ಇರುವ ಕಾಯ್ದೆ, ಕಾನೂನುಗಳ ಬಗ್ಗೆ ತಿಳಿದುಕೊಂಡು ರಾಷ್ಟ, ರಾಜ್ಯ, ಜಿಲ್ಲೆ ಮತ್ತು ತಲೂಕು ಮಟ್ಟದ ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ನೆರವು ಪಡೆದು ನ್ಯಾಯ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ. ಡಾ.ಎಂ.ವಿ. ವೆಂಕಟೇಶ್ ಮಾತನಾಡಿ, ಸ್ವಾತಂತ್ರ್ಯಾ ನಂತರ ಎಲ್ಲರಿಗೂ ಸಮಪಾಲು-ಸಮಬಾಳು ನೀಡುವ ಉದ್ದೇಶದಿಂದ ಹಲವಾರು ಕಾನೂನು ಜಾರಿಗೊಳಿಸಲಾಗಿದೆ. ಮಹಿಳೆಯರು ಕಾನೂನು ಅರಿವು ಪಡೆದು, ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಶಿಕ್ಷಣ ಹಕ್ಕು ನೆರವಿನಿಂದ ಇಂದು ಹಚ್ಚಿನ ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣದ ಜತೆಗೆ ಕಾನೂನು ಅರಿವು ಕೂಡ ಇರಬೇಕು. ಪ್ರತಿಯೊಬ್ಬರೂ ಇತರರನ್ನು ಗೌರವಿಸಬೇಕು. ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛೆಯಿಂದ ವರ್ತಿಸಬಾರದು. ನಿಮ್ಮ ನಡವಳಿಕೆ ಮತ್ತು ಕೆಲಸಗಳಿಂದ ಬೇರೆಯವರಿಗೆ ತೊಂದರೆ ಆದರೆ, ತೊಂದರೆ ಅನುಭವಿಸಿದ ವ್ಯಕ್ತಿಯ ಸ್ವಾತಂತ್ರಯಕ್ಕೆ ಧಕ್ಕೆಯಾಗುತ್ತದೆ. ಅದೇ ರೀತಿ ಕಾನೂನುಗಳೇ ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಿಲ್ಲ ಎಂದರು.
ದಸಂಸ ಜಿಲ್ಲಾಧ್ಯಕ್ಷ ಎಸ್.ಎ. ಜಿಗಳಿ ಹಾಲೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಕರೆಣ್ಣವರ್, ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ನಾಗರಾಜ್, ದಸಂಸ ರಾಜ್ಯ ಸಂಚಾಲಕ ಎಚ್. ಮಲ್ಲೇಶ್ ಇತರರುದ್ದರು.