ವಿದೇಶದಲ್ಲಿ ಉದ್ಯೋಗವೇ ?ಇಲ್ಲೊಂದು ಕಿವಿಮಾತಿದೆ ನೋಡಿ. . .!

street play-davan college

ದವನ್‍ ಕಾಲೇಜು ವಿದ್ಯಾರ್ಥಿಗಳ ಬೀದಿನಾಟಕ

ದಾವಣಗೆರೆ: ನೋಡಿದ್ದು ಸುಳ್ಳಾಗಬಹುದು ಕೇಳಿದ್ದು ಸುಳ್ಳಾಗಬಹುದು ವಿಚಾರಿಸಿ ಯೋಚಿಸಿದಾಗ ವಿಷಯ ತಿಳಿವುದು. . .  ಹೀಗೆ ಬೋರ್ಗರೆದ ದನಿ ಇಂದು ನಗರದ ರಾಮ್‍ ಅಂಡ್‍ ಕೋ ಸರ್ಕಲ್‍ ನಲ್ಲಿ ನೆರೆದಿದ್ದವರ ಮನಕ್ಕೆ ನಾಟಿತು ಎಂದರೆ ತಪ್ಪಾಗಲಾರದು.

ಹೌದು ನಗರದ ದವನ್‍ ಕಾಲೇಜು ವಿದ್ಯಾರ್ಥಿಗಳು ಇಂದು ರಾಮ್‍ ಅಂಡ್‍ ಕೋ ಸರ್ಕಲ್‍ನಲ್ಲಿ ಬೀದಿನಾಟಕ ಮಾಡುವ ಮೂಲಕ ಇಂದಿನ ಯುವ ಪೀಳಿಗೆಯಲ್ಲಿ ಅದರಲ್ಲೂ ವಿದೇಶ ವ್ಯಾಮೋಹದಿಂದ ದೇಶ ತೊರೆಯಲು ಹಾತೊರೆಯುವವರ ಮನ ಮಿಡಿಯುವಂತೆ ಬೀದಿ ನಾಟಕವನ್ನು ಪ್ರಸ್ತುತಪಡಿಸಿದರು.

ದಿಡೀರನೇ ಶ್ರೀಮಂತನಾಗಬೇಕೆನ್ನುವ ಹವಣಿಕೆಗೆ, ವಿದೇಶಿ ಕಂಪನಿಗಳಲ್ಲಿ ಪ್ರಕಟಿಸುವ ಸೌಲಭ್ಯ ಮತ್ತು ಪ್ಯಾಕೇಜ್‍ಗೆ ಮಾರು ಹೋದ ಯುವಕನೊಬ್ಬ ತನ್ನ ತಾಯಿಯ ಬಳಿ ವಿದೇಶದಲ್ಲಿ ನೌಕರಿ ಮಾಡುವ ಆಸೆಯನ್ನು ಹೇಳಿಕೊಳ್ಳುವ, ಮತ್ತು ಇದಕ್ಕಾಗಿ ಮಧ್ಯಮ ವರ್ಗದ  ಆ ಕುಟುಂಬ  ಇತರರೆಡಯಿಂದ ಸಾಲ ಮಾಡಿ ಮಗನನ್ನು ವಿದೇಶಕ್ಕೆ ಕಳಿಸುವ ಸನ್ನಿವೇಶ ಮನ ಕಲಕುವಂತಿತ್ತು. ಮಗ ವಿದೇಶದಲ್ಲಿ ನೆಲೆಗೊಂಡ ನಂತರ ಮಗನೊಂದಿಗೆ ಮಾತನಾಡಲು ಆತನ ಸ್ನೇಹಿತನ ಮೊಬೈಲ್‍ನಿಂದ ಮಾತನಾಡುವ ತಾಯಿ,  ಕೆಲಸದ ಒತ್ತಡದಲ್ಲಿ ಸಿಡುಕುವ ಮಗ, ತಾಯಿಯ ಕ್ಷೇಮ-ಸಮಾಚಾರಕ್ಕೆ ಸ್ಪಂದಿಸದಿದ್ದಾಗ ಹಾಸಿಗೆ ಹಿಡಿದು ಒಂದು ದಿನ ಸಾವನ್ನಪ್ಪುತ್ತಾಳೆ. ಸ್ನೇಹಿತನಿಂದ ತಾಯಿಯ ಅಗಲಿಕೆಯ ಸುದ್ದಿ ತಿಳಿದ ಮಗನಿಗೆ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ತಾನು ದುಡಿಯುತ್ತಿರುವ ಕಂಪನಿ ನಿರಾಕರಿಸಿದಾಗ ತನ್ನ ದೇಶ – ಭಾಷೆ – ಸಂಸ್ಕೃತಿಯನ್ನು ಬಿಟ್ಟು ಅನ್ಯ ದೇಶದಲ್ಲಿ ಬಂದು ತಪ್ಪು ಮಾಡಿದೆ ಎಂಬ ಭಾವ ಮೊಳೆಯುತ್ತದೆ. ಇಂತಹ ಒಂದು ಬೀದಿನಾಟಕ ಆಡಿದ ವಿದ್ಯಾರ್ಥಿಗಳು ತಾವು ಹೇಳಬೇಕೆಂದಿರುವ ವಿಷಯವನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

ಬೀದಿನಾಟಕದಲ್ಲಿ ಬಿಬಿಎ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ದವನ್ ಕಾಲೇಜಿನ ವಿದ್ಯಾರ್ಥಿಗಳಾದ ಸುಹಾಸ್, ಕಲ್ಲೇಶ್, ಭರತ್, ಶ್ರೀರಕ್ಷಾ, ಗಂಗಮ್ಮ, ನೇಹಾ, ಉಲ್ಲಾಸ್, ಪೂರ್ಣಚಂದ್ರ, ತಿಲಕ್, ಶಶಾಂಕ್, ಅಭಿಜಿತ್ ಅಭಿನಯಿಸಿದರು. ಕ್ಲಾಸ್‍ ಇನ್‍ಚಾರ್ಜ್ ಶ್ರೀಮತಿ ಸ್ಮಿತಾ ಎಂ., ಶ್ರೇಯಾ ಎಸ್ ರೇವಣ್ಕರ್, ಶ್ರೀರಕ್ಷಾ, ಹರನ್ ಸುರ್ವೆ, ಮೊಹಮ್ಮದ್ ರಿಜ್ವಾನ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಒಂದು ಬೀದಿ ನಾಟಕಕ್ಕೆ ರಾಮ್‍ ಅಂಡ್‍ ಕೋ ಸರ್ಕಲ್‍ನಲ್ಲಿ ನೆರೆದಿದ್ದ ಜನರಿಂದ  ಉತ್ತಮ ಪ್ರತಿಕ್ರಿಯೆ ಮೂಡಿಬಂದಿತು.

admin

admin

Leave a Reply

Your email address will not be published. Required fields are marked *

error: Content is protected !!