ಕ್ರಾಂತಿದೀಪ ಪತ್ರಿಕೆ ಸಂಪಾದಕರಾದ ಎನ್‍. ಮಂಜುನಾಥ್‍ ಸೇರಿ ಐವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ

kranti-deepa-n-manjunath-and-five-others-were-awarded-mohare-hanamantraya-award

ಬೆಂಗಳೂರು, ಸೆಪ್ಟೆಂಬರ್ 21: ಶಿವಮೊಗ್ಗದ ಕ್ರಾಂತಿದೀಪ ಕನ್ನಡ ದಿನಪತ್ರಿಕೆಯನ್ನು 1985 ಆಗಸ್ಟ್ 15ರಿಂದ ಮುನ್ನಡೆಸಿಕೊಂಡು ಬರುತ್ತಿರುವ ಎನ್‍.ಮಂಜುನಾಥ್‍ (N.MANJUNATH) ಸೇರಿದಂತೆ ಐವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ (MOHARE HANAMANTARAYA AWARD) ಯನ್ನು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು (Department of Information and Public Relations) ಪ್ರಕಟಿಸಿದೆ.

ಅಚ್ಚುಮೊಳೆಯ ಮುದ್ರಣದಲ್ಲಿ ಪತ್ರಿಕೆಯನ್ನು ಪ್ರಾರಂಭಿಸಿದ ಪುರಸ್ಕೃತರು ಕಾಲಕ್ಕನುಗುಣವಾಗಿ ಹೊಸಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮಲೆನಾಡು-ಬಯಲುಸೀಮೆ ಜಿಲ್ಲೆಗಳಲ್ಲಿ ಪತ್ರಿಕೆಯನ್ನು ಜನಪ್ರಿಯಗೊಳಿಸಿದ್ದಾರೆ.

ಹೊಸ ಪತ್ರಕರ್ತರಿಗೆ ಇವರ ದಿನಪತ್ರಿಕೆಯುತರಬೇತಿ ಶಾಲೆಯಂತೆ ಕೆಲಸ ಮಾಡಿದೆ;ಈ ಪತ್ರಿಕೆಯಲ್ಲಿ ವೃತ್ತಿ ಅನುಭವ ಹೊಂದಿದ ಯುವಕರು ನಾಡಿನ ಪ್ರಮುಖ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ  ಇವರಿಗೆ  2021ನೇ ಸಾಲಿಗೆ ಕೊಡಮಾಡುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಕನ್ನಡ ಪತ್ರಿಕಾ ರಂಗದ ಭೀಷ್ಮ ಎಂದೇ ಹೆಸರಾದ ಮೊಹರೆ ಹಣಮಂತರಾಯರು 1892 ರ ನವೆಂಬರ್ 12 ರಂದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಜನಿಸಿದರು. ವಿಜಯಪುರದಲ್ಲೇ ಶಿಕ್ಷಣ ಪೂರೈಸಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆವಾಸವನ್ನೂ ಅನುಭವಿಸಿದವರು. ನಿಷ್ಠುರ ಪತ್ರಿಕೋದ್ಯಮಕ್ಕೆ ಹೆಸರಾದವರು.

ವಿಜಯಪುರದಲ್ಲಿ ಪ್ರಕಟವಾಗುತ್ತಿದ್ದ ‘ಕರ್ನಾಟಕ ವೈಭವ’ ವಾರ ಪತ್ರಿಕೆಯ ಉಪ ಸಂಪಾದಕ, ಸಂಪಾದಕರಾಗಿ ಕಾರ್ಯನಿರ್ವಹಿಸಿದ ಬಳಿಕ, 1934ರಲ್ಲಿ ಆಗ ಬೆಳಗಾವಿಯಲ್ಲಿ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ, ವ್ಯವಸ್ಥಾಪಕ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ನಂತರ ಕರ್ಮವೀರ ವಾರ ಪತ್ರಿಕೆಯನ್ನು ಪ್ರಾರಂಭಿಸಿದರು. 1956ರ ಸೆಪ್ಟೆಂಬರ್‍ನಲ್ಲಿ ಕನ್ನಡದ ಪ್ರಥಮ ಡೈಜೆಸ್ಟ್ ‘ಕಸ್ತೂರಿ’ ಮಾಸಿಕವನ್ನು ಲೋಕ ಶಿಕ್ಷಣ ಟ್ರಸ್ಟ್ ಪರವಾಗಿ ಪ್ರಾರಂಭಿಸಿದರು. 1958ರಲ್ಲಿ ನಿವೃತ್ತಿ ಹೊಂದಿದ ಮೊಹರೆ ಹಣಮಂತರಾಯರು 1960 ರ ಜುಲೈ 27 ರಂದು ಇಹಲೋಕ ತ್ಯಜಿಸಿದರು.

ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆಯನ್ನು ಗುರುತಿಸಿ. ಇವರ ಸ್ಮರಣಾರ್ಥ ‘ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಕರ್ನಾಟಕ ಸರ್ಕಾರವು 2010ರಿಂದ ಪ್ರತಿ ವರ್ಷ ನೀಡುತ್ತಿದೆ. ಈ ಪ್ರಶಸ್ತಿಯು 2 ಲಕ್ಷ ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ. ಈ ವರೆಗೆ 09 ಪತ್ರಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2019 ರಿಂದ 2023 ರವರೆಗಿನ 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಇದೀಗ ಸರ್ಕಾರ ಪ್ರಕಟಿಸಿದೆ.

2019ನೇ ಸಾಲಿಗೆ  ರಾಜೀವ್ ಕಿದಿಯೂರ:

ಗದಗ-ಬೆಟಗೇರಿ ಅವಳಿ ನಗರದಿಂದ ಮುದ್ರಣಗೊಳ್ಳುವ ನವೋದಯ ಕನ್ನಡ ದಿನಪತ್ರಿಕೆಯು ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳಲ್ಲಿ 5 ದಶಕಗಳಿಂದ ಜನಪ್ರಿಯತೆ ಹೊಂದಿದೆ.

ರಾಜೀವ್ ಕಿದಿಯೂರ ಅವರು 1989ರಿಂದ ಪತ್ರಿಕೆಯ ಸಂಪಾದಕ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸುತ್ತಿದ್ದಾರೆ. ನಿಷ್ಪಕ್ಷಪಾತವಾದ ವಸ್ತುನಿಷ್ಠವಾದ ವರದಿಗಳಿಗೆ ಈ ಪತ್ರಿಕೆಯು ಹೆಸರಾಗಿದೆ.

2020ನೇ ಸಾಲಿಗೆ ಇಂದೂಧರ ಹೊನ್ನಾಪುರ:

1975-76ರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಶೋಷಿತ ಹಾಗೂ ಪಂಚಮ ಪತ್ರಿಕೆಗಳನ್ನು ಸ್ಥಾಪಿಸಿ ಮುನ್ನಡೆಸಿದರು.ಮೈಸೂರಿನ ಆಂದೋಲನ,ಪ್ರಜಾವಾಣಿ ದಿನಪತ್ರಿಕೆಗಳ ವರದಿಗಾರರಾಗಿ ಸೇವೆ. 1984ರಲ್ಲಿ ಮುಂಗಾರು ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ,1985ರಲ್ಲಿ ಸುದ್ದಿಸಂಗಾತಿ ವಾರಪತ್ರಿಕೆಯ ಸ್ಥಾಪಕ ಸಂಪಾದಕರಾಗಿ,2002ರಿಂದ ಸಂವಾದ ಮಾಸಪತ್ರಿಕೆಯ ಸಂಪಾದಕರಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಬಂಡಾಯ ಕವನ ಸಂಕಲನ, ಹೊಸದಿಕ್ಕು ಲೇಖನಗಳ ಸಂಕಲನ, ಬಿದಿರುಕೋಲು, ಉಳಿದದ್ದು ಸಂವಿಧಾನ ಸೇರಿದಂತೆ ಅನೇಕ ಕೃತಿಗಳು ಪ್ರಕಟಿಸಿದ್ದಾರೆ;ಇವರ ಕೃತಿಗಳು ನಾಡಿನ ಅನೇಕ ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿವೆ.

2022ನೇ ಸಾಲಿಗೆ ಚಂದ್ರಶೇಖರ್ ಪಾಲೆತ್ತಾಡಿ:

ದಕ್ಷಿಣ ಕನ್ನಡ ಜಿಲ್ಲೆಯ ಪಾಲೆತ್ತಾಡಿಯವರಾದ ಚಂದ್ರಶೇಖರ ಇವರು ಮುಂಬೈಯಲ್ಲಿ ನೆಲೆಸಿದ್ದು,1992ರಿಂದ ಅನೇಕ ಸವಾಲುಗಳ ಮಧ್ಯೆಯೂ ಕರ್ನಾಟಕ ಮಲ್ಲ ಕನ್ನಡ ದಿನಪತ್ರಿಕೆಯನ್ನು ಹೊರನಾಡಿನಿಂದ ಪ್ರಕಟಿಸುತ್ತಿರುವುದು ವಿಶೇಷ.

ಮುಂಬೈಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗೆ ಇವರ ಕೊಡುಗೆ ಅಮೂಲ್ಯವಾಗಿದೆ.

2023ನೇ ಸಾಲಿಗೆ ಶಿವಲಿಂಗಪ್ಪ ದೊಡ್ಡಮನಿ:

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌರಾ(ಬಿ)ದವರಾದ ಶಿವಲಿಂಗಪ್ಪ ದೊಡ್ಡಮನಿ ಅವರು ಕರ್ನಾಟಕ ಸಂಧ್ಯಾಕಾಲ ಸಂಜೆ ದಿನ ಪತ್ರಿಕೆಯನ್ನು 2000ರಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಅದಕ್ಕೂ ಮುನ್ನ ಸರಕಾರಿ ಸೇವೆಯಲ್ಲಿದ್ದ ಇವರು ಪತ್ರಿಕೋದ್ಯಮ ಸೆಳೆತಕ್ಕೆ ಒಳಗಾಗಿ ಮಾಧ್ಯಮ ರಂಗಕ್ಕೆ ಕಾಲಿಟ್ಟ ಇವರು ನಾಡಿನ ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!