ದಾವಣಗೆರೆ: ಮಾನವನು ಕೇವಲ ಹೊಟ್ಟೆಪಾಡಿಗೆ ಸೀಮಿತವಾಗದೇ ಸಾಂಸ್ಕೃತಿಕ, ಸಮಾಜ ಸೇವೆಗಳಿಗೆ ತೊಡಗಿಕೊಂಡರೆ ನಮ್ಮ ನಿಮ್ಮೆಲ್ಲರ ಜೀವನಕ್ಕೆ ಸಾರ್ಥಕತೆ ಬರುತ್ತದೆ. ಮಾನಸಿಕ ಖಿನ್ನತೆಗಳ ಮನಸ್ಸುಗಳನ್ನು ಪುಳಕಿತಗೊಳಿಸುವ ಶಕ್ತಿ ಸಾಂಸ್ಕೃತಿಕ ಚಟುವಟಿಕೆಗಳಿಲ್ಲಿದೆ. ವಾಣಿಜ್ಯ ನಗರಿಯನ್ನು ಸಾಂಸ್ಕೃತಿಕ ನಗರವನ್ನಾಗಿ ಪರಿವರ್ತಿಸಿದ ಸಾಧನೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕಳೆದ ಮೂರುವರೆ ದಶಕಗಳಿಂದ ನಿರಂತರವಾಗಿ ಕಠಿಣ ಪರಿಶ್ರಮದಿಂದ ಸಾಧನೆ ಮಾಡಿದ ಸಾಲಿಗ್ರಾಮ ಗಣೇಶ್ ಶೆಣೈ ಯವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ದಾವಣಗೆರೆಯ ವಿಶ್ವವಿದ್ಯಾಲಯದ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸತೀಶ್‌ಕುಮಾರ್ ಪಿ.ವಲ್ಲೇಪುರೆ ತಮ್ಮ ಅಂತರಾಳದ ಅನಿಸಿಕೆ ಹಂಚಿಕೊಂಡರು.
ದಾವಣಗೆರೆಯ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ನಿನ್ನೆ ತಾನೇ ನಡೆದ ದಸರಾ ಹಬ್ಬದ ಪ್ರಯುಕ್ತ ಉಚಿತ ವಿವಿಧ ಸ್ಪರ್ಧೆಗಳ ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಮಾತನಾಡಿ, ಅಡುಗೆ ಮನೆಗೆ ಸೀಮಿತವಾದ ಮಹಿಳೆಯರಿಗೆ ಅವರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಿ ಮುಕ್ತವಾದ ಅವಕಾಶ ಕೊಡುತ್ತಿರುವುದು ಶೆಣೈಯವರ ಪರಿಶ್ರಮ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಲಾಕುಂಚ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್ ಮಾತನಾಡಿ, ಕೆಲವರಿಗೆ ಅನಾರೋಗ್ಯದಿಂದ ಬಳಲುವವರಿಗೆ ದಿವ್ಯ ಔಷಧ ಈ ಸಾಂಸ್ಕೃತಿಕ ಚಟುವಟಿಕೆಗಳು. ಈಗಿನ ಯುವ ಪೀಳಿಗೆಗಳು ಮೊಬೈಲ್‌ನಲ್ಲಿ ತಲ್ಲಿನವಾಗಿ ಸಾಮಾನ್ಯ ಜ್ಞಾನ, ಸಂಸ್ಕೃತಿ, ಸಂಸ್ಕಾರಗಳ ಕೊರತೆಯಿದೆ. ಈ ಕಲಾಕುಂಚ ಸಂಸ್ಥೆ ಶೈಕ್ಷಣಿಕ ಕಾಳಜಿಯೊಂದಿಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು.
ಕಲಾಕುಂಚ ಮಹಿಳಾ ವಿಭಾಗದ ಉಪಾಧ್ಯಕ್ಷರಾದ ಶ್ರೀಮತಿ ಗಿರಿಜಮ್ಮ ನಾಗರಾಜಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ರೇಣುಕಾ ರಾಮಣ್ಣನವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್ ಸ್ವಾಗತಿಸಿದರು. ಶ್ರೀಮತಿ ಚಂದ್ರಶೇಖರ ಅಡಿಗ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಆಕರ್ಷಕ ಗೃಹಿಣಿ ಸ್ಪರ್ಧೆ, ಮಕ್ಕಳಿಗೆ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕೊನೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಂದಿಸಿದರು.
