ದಾವಣಗೆರೆ: ನಗರದ ಪಿ.ಬಿರಸ್ತೆಯಲ್ಲಿರುವ ಶ್ರೀ ಗಂಧ ರೆಸಿಡೆನ್ಸಿಯ ಗಿಹಾನ್ ಸಭಾಂಗಣದಲ್ಲಿ ಭಾನುವಾರ ಸಂಜೆ ಮನೋಲ್ಲಾಸ ನೀಡುವಂತಹ ಸಂಗೀತ ಕಾರ್ಯಕ್ರಮ ಕಲಾರಸಿಕರನ್ನು ಮಂತ್ರಮುಗ್ಧಗೊಳಿಸಿತು.
ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ರಿ. ಗದಗ, ಶ‍್ರೀಗಂಧ ರೆಸಿಡಿನ್ಸಿ, ಪಿ.ಬಿ.ರಸ್ತೆ, ದಾವಣಗೆರೆ ಹಾಗೂ ಕಲಾ ವಿಕಾಸ ಪರಿಷತ್ ರಿ. ಗದಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ‘ಸಂಗೀತ ಶ‍್ರೀಗಂಧ’ ಮಾಸಿಕ ಕಾರ್ಯಕ್ರಮ-2ರಲ್ಲಿ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದ, ಆಕಾಶವಾಣಿ ಕಲಾವಿದರೂ ಆದ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರು, ಧಾರವಾಡ ಇವರ ತಬಲಾ ಸಾಥ್‍ನಲ್ಲಿ ಸ್ವತಃ ತಮ್ಮ ಮಗಳು ಭಾಗ್ಯಶ‍್ರೀ ಹೂಗಾರ್ ಧಾರವಾಡ ಇವರ ಸಿತಾರ್ ವಾದನ ಕೇಳುಗರನ್ನು ಅಕ್ಷರಶಃ ಮಂತ್ರಮುಗ್ಧಗೊಳಿಸಿತು.

ಅಂದು ವೇದಿಕೆಯಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ವಯೋಲಿನ ವಾದಕರಾದ ಉಸ್ತಾದ್ ಗುಲ್ಜಾರ ಹುಸೈನಿ ಜೈಪುರ ಇವರ ಅನಿರೀಕ್ಷಿತ ಗೈರು ಹಾಜರಿಯನ್ನು ಯುವ ಕಲಾವಿದೆ ಭಾಗ್ಯಶ್ರೀ ಹೂಗಾರ್ ಸಿತಾರ್ ನುಡಿಸುವ ಮೂಲಕ ಕಲಾರಸಿಕರಲ್ಲಿ ಒಂದು ಸಣ್ಣ ನಿರಾಸೆಯ ಎಳೆಯೂ ಮೂಡದಂತೆ ಸಂಗೀತ ಸುಧೆಯನ್ನು ಉಣಬಡಿಸಿದರು.
ಯುವ ಕಲಾವಿದೆಯಾಗಿ ಭಾಗ್ಯಶ‍್ರೀ ಹೂಗಾರ್ ದಾವಣಗೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸಂಗೀತ ಕಛೇರಿಯನ್ನು ನೀಡುತ್ತಿರುವುದರ ಬಗ್ಗೆ ಹೇಳುತ್ತಾ, ರಾಗ್ ಯಮನ್ ಮೂಲಕ ಆರಂಭಿಸಿದರೆ ಕೇಳುಗರಿಗೆ ಒಂದು ಗಂಟೆಯ ಸಮಯ ಸರಿದದ್ದೇ ತಿಳಿಯಲಿಲ್ಲ. ಇನ್ನು ಪಂ. ಸಾತಲಿಂಗಪ್ಪ ದೇಸಾಯಿಯವರ ತಬಲ ಸಾಥ್ ಅವರ ಹಾವ-ಭಾವದೊಂದಿಗೆ ಅಮೋಘವಾಗಿ ಮೂಡಿಬಂದಿತು.
ಕಲಾರಸಿಕರ ಕೊರತೆಯೇ..?
ಇಂತಹ ಮನೋಜ್ಞ ಕಾರ್ಯಕ್ರಮಕ್ಕೆ ದಾವಣಗೆರೆಯಲ್ಲಿ ಕೇಳುಗರ ಕೊರತೆಯೇ? ಅಥವಾ ಈ ಕಾರ್ಯಕ್ರಮದ ಆಯೋಜನೆ ಸಂಗೀತಾಸ್ವಾದಕರನ್ನು ತಲುಪಲಿಲ್ಲವೇ ಎಂಬುದು ಕೇಳುಗರಿಗಾಗಿ ಓರಣಮಾಡಿದ್ದ ಕುರ್ಚಿಗಳು ಕೇಳುತ್ತಿದ್ದವು ಎನ್ನುವುದು ಬಿಟ್ಟರೆ, ಅಲ್ಲಿ ನೆರೆದ ಕೇಳುಗರು ಸಂಗೀತಕ್ಕೆ ತಲೆದೂಗಿದ ಪರಿ ಆಯೋಜಕರಲ್ಲಿ ಹುರುಪು ಮೂಡಿಸುವಂತಿತ್ತು.
ಸಂಗೀತ ಶ‍್ರೀಗಂಧ:
ಈ ಒಂದು ಸಂಗೀತ ರಸದೌತಣಕ್ಕೆ ಸ್ಥಳವನ್ನು ನೀಡಿ ಅದ್ಭುತ ವೇದಿಕೆಯನ್ನು ಆಯೋಜನೆ ಮಾಡಿದ ಯುವ ಉಧ್ಯಮಿ, ಶ‍್ರೀ ಗಂಧ ರೆಸಿಡೆನ್ಸಿಯ ಮಾಲಿಕರು, ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ರಿ. ಗದಗ ರಾಜ್ಯ ಸಂಘಟನಾ ಕಾರ್ಯದರ್ಶಿಯೂ ಆದ ಪಿ.ಬಿ. ವಿನಾಯಕ ರವರು ಪ್ರತಿ ತಿಂಗಳು ಇಂತಹದೊಂದು ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ದಾವಣಗೆರೆಯ ಕಲಾರಸಿಕರಿಗೆ ಸಂಗೀತ ಸುಗ್ಗಿಯೇ ಸರಿ. ಈ ಒಂದು ಮಾಸಿಕ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ದಾವಣಗೆರೆಯಲ್ಲಿ ಸಂಗೀತದ ಕಲರವವನ್ನು ಹೆಚ್ಚಿಸಬೇಕು ಎಂಬುದು ಆಯೋಜಕರ ಮನದಾಳದ ಆಸೆಯಾಗಿದೆ.
ಈ ಒಂದು ಕಾರ್ಯಕ್ರಮದಲ್ಲಿ ವೇ.ಚನ್ನವೀರಸ್ವಾಮಿ ಹಿರೇಮಠ (ಕಡಣಿ), ಗದಗ, ವಿಕ್ರಮ್ ಜೋಶಿ, ಶಂಕರ್ ನಾರಾಯಣ್, ಮುತ್ತಣ್ಣ, ವಿಜಯ ಜೋಶಿ, ಕೊಟ್ರಪ್ಪ, ಸೌಮ್ಯಶ್ರೀ ಸೇರಿದಂತೆ ಅನೇಕ ಕಲಾಭಿಮಾನಿಗಳು ಪಾಲ್ಗೊಂಡಿದ್ದರು.