ಕನಕಪುರ: ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ನಡೆಯುತ್ತದೋ ಇಲ್ಲವೋ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ವಾರಾಂತ್ಯ ಕರ್ಫ್ಯೂ ನಡುವೆಯೂ ಕನಕಪುರದ ಸಂಗಮದಲ್ಲಿ ಇಂದು (ಜ.9) ಬೆಳಿಗ್ಗೆ ಕಾಂಗ್ರೆಸ್ ನಾಯಕರೆಲ್ಲ ಒಗ್ಗಟ್ಟಾಗಿ ಮೇಕೆದಾಟು ಪಾದಯಾತ್ರೆಯ ರಣ ಕಹಳೆ ಮೊಳಗಿಸಿದರು.
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇಕೆದಾಟು ಸಂಗಮದಲ್ಲಿ ಪಾದಯಾತ್ರೆ ಕಾರ್ಯಕ್ರಮ ಆರಂಭಗೊಂಡಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಹಿರಿಯ ಹಲವು ಮುಖಂಡರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಹಿಳಾ ಪ್ರತಿನಿಧಿಗಳು, ಕಾರ್ಯಕರ್ತರು ಭಾಗಿಯಾಗಿದ್ದಾರೆ. ಆದರೆ ಪಾದಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.
ಇಂದು ಬೆಳಗ್ಗೆ ಮೇಕೆದಾಟು ಸಂಗಮದಲ್ಲಿ ಕಾರ್ಯಕ್ರಮ ವೇದಿಕೆಯಲ್ಲಿ ‘ಉಳುವ ಯೋಗಿಯ ನೋಡಲ್ಲಿ’ ಮತ್ತು ಪಾದಯಾತ್ರೆ ಆಗಿರುವುದರಿಂದ ಹೆಜ್ಜೆ ಹಾಕುತ್ತೇವೆ ನಾವು ಎಂಬ ಗೀತೆಯನ್ನು ಕಲಾವಿದರು ಹಾಡಿದರು. ಈ ಸಂದರ್ಭದಲ್ಲಿ ಎಲ್ಲರೂ ಹಸಿರು ಶಾಲನ್ನು ಕೈಯೆತ್ತಿ ಬೀಸುತ್ತಾ ರೈತರಿಗಾಗಿ, ನೀರಿಗಾಗಿ ನಮ್ಮ ಹೋರಾಟ ಎಂದು ಸಾರುತ್ತಿದ್ದರು.
ಆರಂಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಇದು ಅತ್ಯಂತ ಮಹತ್ವದ ಕಾರ್ಯಕ್ರಮ. ಅತ್ಯುಪಯುಕ್ತ ಯೋಜನೆ ಅನುಷ್ಠಾನಕ್ಕಾಗಿ ಅನುಷ್ಠಾನದ ಶೀಘ್ರ ಅನುಷ್ಠಾನಕ್ಕಾಗಿ ಆಗ್ರಹಿಸಿ ನಡೆಸುತ್ತಿರುವ ನಡಿಗೆ. ರಾಜ್ಯ, ಕೇಂದ್ರ ಸರಕಾರಗಳು ಇದಕ್ಕೆ ಸ್ಪಂದಿಸಬೇಕು. ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಬೇಕು ಎಂದು ಹೇಳಿದರು.
ಸರ್ವಧರ್ಮ ಮುಖಂಡರಿಂದ ಚಾಲನೆ:
ಇಂದು ಮೇಕೆದಾಟು ಸಂಗಮದಲ್ಲಿ ಹಿಂದೂ – ಕ್ರೈಸ್ತ- ಮುಸ್ಲೀಮ್ ಧರ್ಮಗುರುಗಳು ಕುಂಡಗಳಲ್ಲಿದ್ದ ಸಸಿಗಳಿಗೆ ನೀರೆರೆಯುವ ಮೂಲಕ ನಡಿಗೆ ಆರಂಭದ ಸಮಾರಂಭಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ ಮೂಲಕ ನೀರಿಗಾಗಿ ಹೋರಾಟಕ್ಕೆ ಬದ್ಧ ಎಂಬ ಸಂದೇಶ ಸಾರಿದರು. ಕಾಂಗ್ರೆಸ್ ಶಾಸಕಿಯರು, ಹಿರಿಯ ಕಾರ್ಯಕರ್ತೆಯರು ವೇದಿಕೆ ಸನಿಹ ಇದ್ದ ಕೊಡಗಳಿಗೆ ಸಂಗಮದ ನೀರನ್ನು ತಂದು ತುಂಬಿದರು. ಈ ನೀರನ್ನು ಬೆಂಗಳೂರಿಗೆ ತರಲಾಗುತ್ತದೆ.
ಕೋವಿಡ್ ನಿಯಮ ಗಾಳಿಗೆ ತೂರಿದ ಮುಖಂಡರು:
ಕೋವಿಡ್ ನಿಯಮಾವಳಿಗಳ ಪ್ರಕಾರ ಕಾರ್ಯಕ್ರಮ ನಡೆಸುವುದಾಗಿ ಕಾಂಗ್ರೆಸ್ ಮುಖಂಡರು ಪದೇ ಪದೇ ಹೇಳಿದ್ದರೂ ಇಂದು ಮೊದಲ ದಿನವೇ ಅದು ಪಾಲನೆಯಾಗುತ್ತಿರುವುದು ಕಂಡುಬರುತ್ತಿಲ್ಲ. ಸಾಕಷ್ಟು ಜನರು ಪಾದಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸಾಮಾಜಿಕ ಅಂತರ ಸಂಪೂರ್ಣವಾಗಿ ಮರೆಯಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾದ ಜನರಲ್ಲಿ ಬಹುತೇಕ ಮಂದಿ ಮಾಸ್ಕ್ ಧರಿಸಿಲ್ಲ.
ಮಾಸ್ಕ್ ಧರಿಸದ ಡಿ ಕೆ ಶಿವಕುಮಾರ್:
ಪಾದಯಾತ್ರೆ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ ಮಾಸ್ಕ್ ಧರಿಸದೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹಲವು ಕಾರ್ಯಕರ್ತರು ಕೂಡಾ ಮಾಸ್ಕ್ ಧರಿಸದೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು 10 ದಿನಗಳ ಕಾಲ ಕಾಂಗ್ರೆಸ್ ಪಾದಯಾತ್ರೆ ನಡೆಯಲಿದೆ. ಕೊನೆಯ ದಿನದಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ.
ಕನಕಪುರದಿಂದ ಬೆಂಗಳೂರಿಗೆ ಪಾದಯಾತ್ರೆ: ಮೇಕೆದಾಟು ಜಲಾಶಯ ನಿರ್ಮಾಣದಿಂದ ಸಮದ್ರಕ್ಕೆ ಹರಿದು ವ್ಯರ್ಥವಾಗಿ ಹೋಗುವ ಕಾವೇರಿ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿಯೇ ಈ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳುತ್ತಿದ್ದು, ಇಂದು ನಾಯಕರು ಸುಮಾರು 15ರಿಂದ 20ಕಿಲೋ ಮೀಟರ್ ಪಾದಯಾತ್ರೆ ಕೈಗೊಳ್ಳಲಿದ್ದು, ಕನಕಪುರದಿಂದ ಬೆಂಗಳೂರಿಗೆ 11 ದಿನಗಳ ಕಾಲ ಜನವರಿ 19ರವರೆಗೆ ಕೈಗೊಂಡಿರುವ ಪಾದಯಾತ್ರೆ ಇದಾಗಿದೆ.