ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ‘ವಿಶೇಷ’ತೆ ಮುಂದುವರಿಸಿದ ಬಿಜೆಪಿ

ಬಿಜೆಪಿ-ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪ್ರಥಮ ಪ್ರಜೆ ಆಗುವುದು ಖಚಿತ?

ಸುದ್ದಿ360 ವಿಶೇಷ ವರದಿ:  ಒಡಿಶಾ ಮೂಲದ ರಾಜಕಾರಣಿ, ಸಮಾಜ ಸೇವಕಿ ಹಾಗೂ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಎನ್‌ಡಿಎಗೆ ಇರುವ ಸಂಖ್ಯಾ ಬಲ ಮತ್ತು ಬಿಜು ಜನತಾದಳ, ವೈಎಸ್‌ಆರ್ ಕಾಂಗ್ರೆಸ್ ಸೇರಿ ಹಲವು ಪ್ರಾದೇಶಿಕ ಪಕ್ಷಗಳ ಬೆಂಬಲ  ಇರುವ ಕಾರಣ ಮುರ್ಮು ರಾಷ್ಟ್ರಪತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶ ದೊರೆತಾಗಲೆಲ್ಲಾ ವಿಶೇಷ ವ್ಯಕ್ತಿಗಳನ್ನು ಆಯ್ಕೆ ಮಾಡಿ ಗಮನಸೆಳೆಯುವ ಬಿಜೆಪಿ ಇ ಬಾರಿ ಹಿಂದುಳಿದ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು ದೇಶದ ಪ್ರಥಮ ಪ್ರಜೆ ಹುದ್ದೆಗೆ ಆಯ್ಕೆ ಮಾಡಿದೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ, ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿ, ಭಾರತದ ಮಿಸೈಲ್ ಮ್ಯಾನ್ ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿತ್ತು. ಬಳಿಕ ಮೋದಿ ನೇತೃತ್ವದ ಬಿಜೆಪಿ ರಾಮನಾಥ ಕೋವಿಂದ್‌ರನ್ನು ರಾಷ್ಟ್ರಪತಿ ಯಾಗಿಸಿತ್ತು. ಇದೀಗ ಬುಡಕಟ್ಟು ಸಮುದಾಯದ ದ್ರೌಪತಿ ಮುರ್ಮು ರಾಷ್ಟ್ರಪತಿ ಯಾಗುವುದು ಬಹುತೇಕ ಖಚಿತವಾಗಿದೆ.

ಈ ಮೂಲಕ ದೇಶದ ಪ್ರಥಮ ಪ್ರಜೆ (ರಾಷ್ಟ್ರಪತಿ) ಹುದ್ದೆಗೇರಿದ (President of India) ದೇಶದ ಎರಡನೇ ಮಹಿಳೆ (ಪ್ರತಿಭಾ ಪಾಟೀಲ್ ಮೊದಲ ಮಹಿಳಾ ರಾಷ್ಟ್ರಪತಿ) ಮತ್ತು ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಅಷ್ಟೇನೂ ರಾಜಕೀಯ ಅನುಭವ ಹೊಂದಿರದ ಮುರ್ಮು, ತಮ್ಮ ಸಾಮಾಜಿಕ ಕಳಕಳಿ, ಮಾನವೀಯತೆ ನೆಲೆಯಲ್ಲಿ ಹೆಚ್ಚು ಜನಾನುರಾಗಿಯಾಗಿದ್ದಾರೆ.

ಒಡಿಶಾ ಮೂಲ

ದ್ರೌಪದಿ ಮುರ್ಮು ಅವರು 1958ರ ಜೂನ್ 20ರಂದು ಸಂತಾಲ್ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಒಡಿಶಾದ ಮಯೂರಭಂಜ್ ತೆಹಸಿಲ್ ವ್ಯಾಪ್ತಿಯ ಉಪಬೇಡಾ ಹುಟ್ಟಿದ ಊರು. ಭುವನೇಶ್ವದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಅಧ್ಯಯನ ಕೈಗೊಂಡು ಬಿ.ಎ ಪದವಿ ಪಡೆದ ಅವರು, 1979ರಿಂದ 1983ರವರೆಗೆ ನೀರಾವರಿ ಮತ್ತು ಇಂಧನ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಸೇವೆ ಸಲ್ಲಿಸಿದರು. 1994ರಲ್ಲಿ ಶ್ರೀ ಅರಬಿಂದೋ ಇಂಟಿಗ್ರಲ್ ಎಜುಕೇಷನ್ ಸೆಂಟರ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿ, 1997ರವರೆಗೆ ಸೇವೆ ಸಲ್ಲಿಸಿದರು. ಅದೇ ವರ್ಷ ಬಿಜೆಪಿ ಸೇರಿದರು.

ಎರಡು ಬಾರಿ ಶಾಸಕಿ, ಸಚಿವೆ

ದೌಪದಿ ಮುರ್ಮು ಅವರು ಶಾಸಕಿಯಾಗಿ ಆಯ್ಕೆಯಾಗುವ ಮುಂಚೆ, ರಾಯರಂಗಪುರ ನಗರ ಪಂಚಾಯತ್‌ನಲ್ಲಿ ಕೌನ್ಸಿಲರ್ ಆಗಿ ಸೇವೆ – ಸಲ್ಲಿಸಿದ್ದಾರೆ. ಬಿಜೆಪಿಯ ಬುಡಕಟ್ಟು ಮೋರ್ಚಾದ ಉಪಾಧ್ಯಕ್ಷೆಯೂ ಆಗಿದ್ದರು. ಬಳಿಕ ರಾಯರಂಗಪುರ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ-ಬಿಜೆಡಿ ನೇತೃತ್ವದ ಸರಕಾರದಲ್ಲಿ ವಾಣಿಜ್ಯ ಮತ್ತು ಸಾರಿಗೆ, ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿಯೂ ಕೆಲಸ ಮಾಡಿದ್ದಾರೆ. 2015ರ ಮೇ 18ರಿಂದ ಐದು ವರ್ಷಗಳ ಕಾಲ ಜಾರ್ಖಂಡ್ ರಾಜ್ಯಪಾಲರಾಗಿ (ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರು) ಕೆಲಸ ಮಾಡಿ, ಜನಮನ್ನಣೆ ಗಳಿಸಿದ್ದಾರೆ. ಜಾರ್ಖಂಡದಲ್ಲಿ ಇರುವಷ್ಟು ದಿನವೂ ‘ಜನರ ರಾಜ್ಯಪಾಲ’ರೆಂದು ಗುರುತಿಸಿಕೊಂಡಿದ್ದರು.

ದ್ರೌಪದಿ ಮುರ್ಮುಗೆ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಬೆಂಬಲ ಇದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜೊತೆ ಮುರ್ಮು ಉತ್ತಮ ಸ್ನೇಹವನ್ನೂ ಹೊಂದಿದ್ದಾರೆ. ಹೀಗಾಗಿ ಮುಂದಿನ ರಾಷ್ಟ್ರಪತಿ ಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಜೀವನ ಅವಘಡಗಳ ಸರಮಾಲೆ

ಮುರ್ಮು ಬಿಜೆಪಿ ಪ್ರಮುಖ ನಾಯಕರಾಗಿ ಸಾಕಷ್ಟು ಜನಪ್ರಿಯರಾಗಿದ್ದು, ಎಲ್ಲರೊಂದಿಗೆ ಸೌಹಾರ್ದಯುತ ಬಾಂಧವ್ಯ ಹೊಂದಿದ್ದಾರೆ. ಮುರ್ಮು ಅವರ ಜೀವನದಲ್ಲಿ ಅವಘಡಗಳ ಸರಮಾಲೆಯೇ ಘಟಿಸಿವೆ. ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾಗಿದ್ದ ದ್ರೌಪದಿ ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು. ಪತಿ ಶ್ಯಾಮ್ ಚರಣ್ ಹೃದಯಾಘಾತದಿಂದ ಮೃತಪಟ್ಟರೆ, 2009ರಲ್ಲಿ ಒಬ್ಬ ಪುತ್ರ ನಿಗೂಢವಾಗಿ ಸಾವಿಗೀಡಾದರು. ಬಳಿಕ 2012ರಲ್ಲಿ ಮತ್ತೊಬ್ಬ ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಪುತ್ರಿ ಇತಿಶ್ರೀ ಅವರು ಗಣೇಶ್ ಹೆಂಬ್ರಮ್ ಅವರನ್ನು ಮದುವೆಯಾಗಿದ್ದು, ಭುವನೇಶ್ವರದಲ್ಲಿ ನೆಲೆಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!