ಸಿಲಿಂಡರ್ ಸ್ಪೋಟ – ಅಜ್ಜಮೊಮ್ಮಗಳಿಗೆ ಗಂಭೀರ ಗಾಯ

ಸುದ್ದಿ360 ಚಿಕ್ಕಮಗಳೂರು, ಜೂ.23: ಜಿಲ್ಲೆಯ ಬೀರೂರು ಸಮೀಪದ ಅಜ್ಜಂಪುರ ರಸ್ತೆಯಲ್ಲಿರುವ ಯರೇಹಳ್ಳಿ ಗ್ರಾಮದ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಿಸಿದ್ದು ಮನೆಯಲ್ಲಿದ್ದ ಮರುಳ ಸಿದ್ದಪ್ಪ ಮತ್ತು ಅವರ ಮೊಮ್ಮಗಳು ಚೈತನ್ಯ ಎಂಬುವರಿಗೆ ಗಾಯಗಳಾಗಿವೆ. ಅಲ್ಲದೆ ಸ್ಪೋಟದ ತೀವ್ರತೆಗೆ ಮನೆಯ ಛಾವಣಿಯ ಹಂಚುಗಳು ಹಾರಿ ಹೋಗಿ ಮನೆಯೂ ಹಾನಿಗೊಳಗಾಗಿದೆ.

ಮನೆಯಲ್ಲಿ ಮಗಳು ಮತ್ತು ಅಳಿಯನೊಂದಿಗೆ ವಾಸವಿದ್ದ ಮರುಳ ಸಿದ್ದಪ್ಪ ಮಧ್ಯಾಹ್ನ ಅಡುಗೆ ಮಾಡಲು ಹೋದಾಗ ಅನಿಲ ಸೋರಿಕೆಯಾಗಿ ಸಿಲಿಂಡರ್ಗೆ ಬೆಂಕಿ ಹೊತ್ತಿಕೊಂಡಿದೆ. ಮನೆಯಿಂದ ಹೊರಗೆ ಓಡಿ ಬರುವಷ್ಟರಲ್ಲಿಯೇ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ಮರುಳಸಿದ್ದಪ್ಪನ ಎಡಭುಜಕ್ಕೆ ಸುಟ್ಟ ಗಾಯವಾಗಿದೆ. ಘಟನೆಯಿಂದಾಗಿ ಮನೆಯ ಚಾವಣಿ, ಹೆಂಚುಗಳು ಹಾರಿ ಹೋಗಿವೆ.

ಜಗುಲಿಯಲ್ಲಿ ಆಟವಾಡುತ್ತಿದ್ದ ಮೊಮ್ಮಗಳು ಚೈತನ್ಯಳ ತಲೆಯ ಮೇಲೆ ಹೆಂಚು ಬಿದ್ದು ಗಾಯವಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವಾಗದಂತೆ ಕ್ರಮ ವಹಿಸಿದ್ದಾರೆ. ಗ್ರಾಮಸ್ಥರು ಗಾಯಾಳುಗಳನ್ನು ಬೀರೂರು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ದೊರಕಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿರುವುದಾಗಿ ವರದಿಯಾಗಿದೆ.

Leave a Comment

error: Content is protected !!